ಕಥುವಾ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಭಾನುವಾರ ನಡೆದ ಎನ್ ಕೌಂಟರ್ ನಲ್ಲಿ ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ. ಇದರೊಂದಿಗೆ ಘಟನೆಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಎರಡಕ್ಕೇರಿದೆ.
ನಿನ್ನೆ ಮಧ್ಯಾಹ್ನ ಬಿಲ್ಲವರ್ ತಹಸಿಲ್‌ನ ಕಾಗ್-ಮಂಡ್ಲಿಯಲ್ಲಿ ನಡೆದ ಎನ್ ಕೌಂಟರ್ ಸ್ಥಳದಿಂದ ಉಗ್ರನ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಎರಡನೇ ದಿನವೂ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮೂರ್ನಾಲ್ಕು ವಿದೇಶಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಶನಿವಾರದಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ತಿಳಿಸಿದ್ದಾರೆ.
ಶನಿವಾರ ಸಂಜೆ ಶೋಧನಾ ತಂಡದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದಾಗ ಓರ್ವ ಪೊಲೀಸ್ ಹುತಾತ್ಮರಾಗಿದ್ದು, ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದರು.
ಸ್ಥಳದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ದೊರೆತ ನಂತರ ಕಾರ್ಯಾಚರಣೆ ಆರಂಭಿಸಲಾಯಿತು. ಗುಂಡಿನ ಚಕಮಕಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ಬಶೀರ್ ಅಹ್ಮದ್ ಹುತಾತ್ಮರಾದರು. ಎನ್ ಕೌಂಟರ್ ಇಲ್ಲಿ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಇಡಿ ಪ್ರದೇಶ ಬಿಗಿ ಭದ್ರತೆಯಲ್ಲಿದ್ದು, ಅಡಗಿರುವ ಮೂರ್ನಾಲ್ಕು ವಿದೇಶಿ ಉಗ್ರರನ್ನು ಹೊಡೆದುರುಳಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಜೈನ್ ತಿಳಿಸಿದರು.
ಮನೆಯೊಂದರಲ್ಲಿ ವಿದೇಶಿ ಉಗ್ರರು ತಂಗಿರುವ ಮಾಹಿತಿ ದೊರೆತ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಭಯೋತ್ಪಾದಕರ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಅವರನ್ನು ಹತ್ಯೆಗೈಯುವ ಪ್ರಯತ್ನದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಹಿಂಸಾಚಾರ ಮುಕ್ತ ಮೂರನೇ ಹಂತದ ಮತದಾನದ ಖಾತ್ರಿಗಾಗಿ ಎಲ್ಲಾ ಪ್ರದೇಶಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕಥುವಾ ಜೊತೆಗೆ ಜಮ್ಮು ಪ್ರದೇಶದ ಜಮ್ಮು, ಉಧಂಪುರ್ ಮತ್ತು ಸಾಂಬಾ ಜಿಲ್ಲೆ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.