ವಾಷಿಂಗ್ಟನ್: ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ಭಾರತವನ್ನು ರಫ್ತು ಕ್ಷೇತ್ರದಲ್ಲಿ ಬಾಂಗ್ಲಾದೇಶ, ವಿಯೆಟ್ನಾಂನಂತಹ ಸಣ್ಣ ದೇಶಗಳು ಹಿಂದಿಕ್ಕುತ್ತಿವೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ.
ವಿಶ್ವ ಬ್ಯಾಂಕ್ ವರದಿಯನ್ನು ಆಧರಿಸಿ ಬ್ಲೂಮ್‌ಬರ್ಗ್ ಈ ಸುದ್ದಿ ಮಾಡಿದ್ದು, 'ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆಯಾದರೂ ಅದರ ಜಾಗತಿಕ ವ್ಯಾಪಾರ ಪಾಲು ಮಾತ್ರ ಹೆಚ್ಚುತ್ತಿಲ್ಲ.
ಬಾಂಗ್ಲಾದೇಶ, ವಿಯೆಟ್ನಾಂ ಮೊದಲಾದ ದೇಶಗಳು ಮ್ಯಾನುಫ್ಯಾಕ್ಚರಿಂಗ್ ಉತ್ಪನ್ನಗಳ ರಫ್ತಿನಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ. ಜಿಡಿಪಿಗೆ ಪ್ರತಿಶತವಾಗಿ ಸರಕು ಮತ್ತು ಸೇವೆಗಳ ಪ್ರಮಾಣ ಕಳೆದ ಒಂದು ದಶಕದಲ್ಲಿ ಕಡಿಮೆ ಆಗುತ್ತಾ ಬಂದಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಹೇಳಿದೆ' ಎನ್ನಲಾಗಿದೆ.
ಪ್ರಮುಖವಾಗಿ ಲೆದರ್, ಜವಳಿ, ಉಡುಪು, ಪಾದರಕ್ಷೆಗಳ ರಫ್ತಿನಲ್ಲಿ ಭಾರತದ ಜಾಗತಿಕ ಪಾಲು 2002ರಲ್ಲಿ ಶೇ. 0.9ರಷ್ಟಿತ್ತು. 2013ರಲ್ಲಿ ಅದು ಶೇ. 4.5ಕ್ಕೆ ಏರಿತ್ತು. ಅಲ್ಲಿಂದಾಚೆ ಕಡಿಮೆ ಆಗುತ್ತಾ ಬಂದಿದೆ. 2022ರಲ್ಲಿ ಈ ಪ್ರಮಾಣ ಶೇ. 3.50ಕ್ಕೆ ಇಳಿದಿದೆ ಎಂದು ಹೇಳಿದೆ. ಅಂತೆಯೇ ಅದೇ ವೇಳೆ, ಈ ಉತ್ಪನ್ನಗಳ ರಫ್ತಿನಲ್ಲಿ ಬಾಂಗ್ಲಾದೇಶದ ಪಾಲು ಶೇ. 5.1ರಷ್ಟಿದ್ದರೆ ವಿಯೆಟ್ನಾಂನದ್ದು ಶೇ. 5.9ರಷ್ಟಿದೆ. ರಫ್ತು ಸ್ಪರ್ಧೆಯಲ್ಲಿ ಸಣ್ಣ ಪುಟ್ಟ ದೇಶಗಳು ಭಾರತವನ್ನು ಹಿಂದಿಕ್ಕುತ್ತಿರುವುದು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ದತ್ತಾಂಶದಿಂದ ಸ್ಪಷ್ಟವಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆ ರಫ್ತಿನಲ್ಲಿ ಭಾರತವೇ ಮುಂದು
ಒಟ್ಟಾರೆ ರಫ್ತು ಬಂದರೆ ಭಾರತ ಮುಂದಿದೆ. ಒಂದು ವರ್ಷದಲ್ಲಿ ಸುಮಾರು 800 ಬಿಲಿಯನ್ ಡಾಲರ್ನಷ್ಟು ರಫ್ತಾಗುತ್ತದೆ. ಇದಕ್ಕೆ ಹೋಲಿಸಿದರೆ ಬಾಂಗ್ಲಾದ ರಫ್ತು 60 ಬಿಲಿಯನ್ ಡಾಲರ್ ಆಸುಪಾಸಿನಲ್ಲಿದೆ. ಆದರೆ, ಜವಳಿ, ಉಡುಪು ಮತ್ತು ಲೆದರ್ ಉತ್ಪನ್ನಗಳ ರಫ್ತಿನಲ್ಲಿ ಬಾಂಗ್ಲಾ, ವಿಯೆಟ್ನಾಂ ದೇಶಗಳು ಭಾರತವನ್ನು ಹಿಂದಿಕ್ಕಿವೆ. ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಚೀನಾ ದೇಶ ಈಗಲೂ ಅಗ್ರ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಕಾರ್ಮಿಕ ಶ್ರಮ ಬೇಡುವ ಕ್ಷೇತ್ರದ ಕಡೆಗಣನೆ
ಇದೇ ವೇಳೆ ಭಾರತದಲ್ಲಿ ಕಾರ್ಮಿಕ ಶ್ರಮ ಬೇಡುವ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಗಾರ್ಮೆಂಟ್ಸ್ ಮತ್ತು ಜವಳಿ ಉದ್ಯಮಗಳು ಸಾಕಷ್ಟು ಉದ್ಯೋಗ ಸೃಷ್ಟಿಸಬಲ್ಲಂಥವು. ಕಾರ್ಮಿಕರ ಶ್ರಮ ಬೇಡುವ ಕ್ಷೇತ್ರಗಳಾಗಿವೆ. ಇದು ಪ್ರಬಲಗೊಂಡರೆ ಹೆಚ್ಚು ಉದ್ಯೋಗ ಸೃಷ್ಟಿಸಬಹುದು.
ಆದರೆ, ಭಾರತ ಮಾಡುತ್ತಿರುವ ರಫ್ತಿನಲ್ಲಿ ಹೆಚ್ಚಿನ ಭಾಗವು ಬಂಡವಾಳ ಬೇಡುವ ಕ್ಷೇತ್ರದ್ದಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿ ಕಡಿಮೆ ಎನ್ನಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ವಿವಿಧ ಪಿಎಲ್ಐ ಸ್ಕೀಮ್ ಮೂಲಕ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ವಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆಯಾದರೂ ಕಾರ್ಮಿಕ ಶ್ರಮ ಬೇಡುವ ಕ್ಷೇತ್ರದ ಕಡೆಗಣನೆ ಆದಂತಿದೆ ಎಂದು ಹೇಳಿದೆ.