ಜಮ್ಮು: 1989ರಲ್ಲಿ ಅಪಹರಣಗೊಂಡಿದ್ದ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಪುತ್ರಿ, ರುಬೈಯಾ ಸಯೀದ್ ರಕ್ಷಿಸುವುದಕ್ಕಾಗಿ ಉಗ್ರರನ್ನು ಬಿಡುಗಡೆ ಮಾಡಿದ್ದೇ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯಲು ಕಾರಣಗಳಲ್ಲೊಂದು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ 'ನಾಶ'ಕ್ಕೆ ಎನ್‌ಸಿ, ಕಾಂಗ್ರೆಸ್ ಹಾಗೂ ಪಿಡಿಪಿ ಕಾರಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಅವರು ತಿರುಗೇಟು ನೀಡಿದ್ದಾರೆ.
'1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು (ಐಸಿ-814) ಅಪಹರಿಸಿ ಅಫ್ಗಾನಿಸ್ತಾನದ ಕಂದಹಾರಕ್ಕೆ ಒಯ್ಯಲಾಗಿತ್ತು. ಆ ಸಂದರ್ಭದಲ್ಲಿಯೂ, ವಿಮಾನದಲ್ಲಿದ್ದವರ ರಕ್ಷಣೆಗಾಗಿ ಉಗ್ರರನ್ನು ಬಿಡುಗಡೆ ಮಾಡಿದ್ದು ಯಾರು? ಇದು ಕೂಡ ಭಯೋತ್ಪಾದನೆ ಬೆಳೆಯಲು ಕಾರಣ' ಎಂದಿದ್ದಾರೆ.
'1947ರಲ್ಲಿ ದೇಶ ವಿಭಜನೆಗೊಂಡ ವೇಳೆ ನ್ಯಾಷನಲ್ ಕಾನ್ಫರೆನ್ಸ್ ಇದ್ದಿದ್ದರಿಂದ ಜಮ್ಮು-ಕಾಶ್ಮೀರ ಭಾರತದಲ್ಲಿಯೇ ಉಳಿಯಿತು. ಇಲ್ಲದಿದ್ದರೆ ಇದು ಪಾಕಿಸ್ತಾನಕ್ಕೆ ಸೇರುತ್ತಿತ್ತು. ಈ ಕಾರಣಕ್ಕೆ ಜನರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಕೃತಜ್ಞರಾಗಿರಬೇಕು' ಎಂದರು.