ನವದೆಹಲಿ: ಹಮಾಸ್ ಮೇಲಿನ ಭೀಕರ ದಾಳಿಯ ನಡೆವೆ ಇಸ್ರೇಲ್ ಇದೀಗ ಲೆಬನಾನ್ ಮೇಲೂ ದಾಳಿಯನ್ನು ತೀವ್ರಗೊಳಿಸಿದ್ದು ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಇದರ ಮಧ್ಯೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಭೇಟಿಯಾದರು. ಈ ವೇಳೆ ಮೋದಿ ಭಾರತ ಶಾಂತಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ವಿಚಾರದಲ್ಲಿ ಭಾರತ ಎಂದಿಗೂ ಮುಂದಿರುತ್ತದೆ ಎಂದು ಪುನರುಚ್ಚರಿಸಿದರು. ನಾವು ಪ್ಯಾಲೆಸ್ತೀನ್ ಜನರೊಂದಿಗೆ ದೀರ್ಘಕಾಲದ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಸಭೆಯ ನಂತರ ಪ್ರಧಾನಿ ಮೋದಿ ಹೇಳಿದರು.
ಕಳೆದ ವಾರ ಯುಎನ್‌ಜಿಎ 12 ತಿಂಗಳೊಳಗೆ ಪ್ಯಾಲೆಸ್ತೀನ್ ಪ್ರದೇಶಗಳಿಂದ ಇಸ್ರೇಲ್ ಹಿಂದೆ ಸರಿಯುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದನ್ನು ಸ್ಮರಿಸಬಹುದಾಗಿದೆ. ನಿರ್ಣಯದ ಪರವಾಗಿ 143 ದೇಶಗಳು ಮತ ಚಲಾಯಿಸಿದರೆ, ಭಾರತವೂ ಸೇರಿದಂದೆ 43 ದೇಶಗಳು ತಟಸ್ಥವಾಗಿದ್ದರೆ 14 ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಭಾರತವು ಅಂದಿನ ಮತದಾನದಿಂದ ದೂರ ಉಳಿದಿದೆ. ನಾವು ಸಂವಾದ ಮತ್ತು ರಾಜತಾಂತ್ರಿಕತೆಯ ಪ್ರಬಲ ಪ್ರತಿಪಾದಕರಾಗಿದ್ದೇವೆ. ಘರ್ಷಣೆಗಳನ್ನು ಪರಿಹರಿಸಲು ಬೇರೆ ಯಾವುದೇ ಮಾರ್ಗವಿಲ್ಲ ಎಂದು ನಾವು ನಂಬುತ್ತೇವೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾದ ರಾಯಭಾರಿ ಪಿ ಹರೀಶ್ ಹೇಳಿದರು.
ಸಂಘರ್ಷದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ ಮತ್ತು ಸ್ಥಿರವಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿ ಹಾಗೂ ನಾಗರಿಕರ ಜೀವಹಾನಿಯನ್ನು ನಾವು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ಅಲ್ಲದೆ ನಾವು ತಕ್ಷಣದ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಕರೆ ನೀಡುತ್ತೇವೆ ಎಂದು ರಾಯಭಾರಿ ಹರೀಶ್ ಸೇರಿಸಿದ್ದರು.
ಹೆಜ್ಬುಲ್ಲಾ ಉಗ್ರಗಾಮಿ ಪಡೆಯ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಇಂದು ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 21 ಮಕ್ಕಳು ಸೇರಿದಂತೆ 274 ಮಂದಿ ಸಾವನ್ನಪ್ಪಿದ್ದು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಪ್ರಕಟಣೆಯಲ್ಲಿ ತಿಳಿಸಿದೆ.