ಕಾಸರಗೋಡು: ಹರಿಜನ ಪುನರುತ್ಥಾನದ ಅಂಗವಾಗಿ ವಡಗರಕ್ಕೆ ಆಗಮಿಸಿದ್ದ ಸಂದರ್ಭ ಮಹಾತ್ಮಾಗಾಂಧಿ ಅವರನ್ನು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಆಭರಣ ಸಮರ್ಪಿಸಿದ್ದ ಶಿಕ್ಷಕಿ ಕೌಮುದಿ ಅವರ ಸಂಸ್ಮರಣಾ ಸಮಾರಂಭ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ವಿದ್ಯಾರ್ಥಿಗಳು ಹಿಂದಿಯಲ್ಲಿ ತಯಾರಿಸಿದ ಶಿಕ್ಷಕಿ ಕೌಮುದಿ ಅವರ ಜೀವನ ಚರಿತ್ರೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಶಾಲಾ ಹಿಂದಿ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಸೆರೆನ್ ಮರ್ಯಮ್‍ಸುಬಿಶ್, ಕೌಮುದಿ ಟೀಚರ್ ಅವರ ವೇಷ ಧರಿಸಿ ವೇದಿಕೆ ಮೇಲೆ ತಾವೇ ಕಾಣಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕೌತುಕ ಮುಡಿಸಿದರು. ಏಳನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಆಳ್ವ ಸಿದ್ಧಪಡಿಸಿದ ಕೌಮುದಿ ಶಿಕ್ಷಕಿಯ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಕವಿ ಎಂ.ಪಿ.ಜಿಲ್‍ಜಿಲ್ ಅವರು ಬಿಡುಗಡೆಗೊಳಿಸಿ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಶೀದ್ ಪೂರಣಂ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಾಯಕಿ ಎ.ಪಿ.ಮೀನಾಕುಮಾರಿ, ಶಿಕ್ಷಕರಾದ ಸರ್ವಮಂಗಳರಾವ್, ಕೆ.ಎನ್.ಸುನೀಲಕುಮಾರ್, ಶಾಲಾ ಮುಖಂಡರಾದ ಸಚಿನ್ ಥಾಮಸ್, ಎ.ಕೆ.ಆರಾಧ್ಯ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಡಿ ವಿಮಲಾಕುಮಾರಿ ಸ್ವಾಗತಿಸಿದರು. ಎಸ್‍ಆರ್‍ಜಿ ಸಂಚಾಲಕ ಬಿ ರೋಶನಿ ವಂದಿಸಿದರು.