ಬದಿಯಡ್ಕ: ವಿದ್ಯಾರ್ಥಿಗಳು ಸ್ಥಿರತೆಯನ್ನು ಕಾಯ್ದುಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಮಾನಸಿಕವಾಗಿಯೂ ಶಾರೀರಿಕವಾಗಿಯೂ ನಾವು ಸದೃಢರಾಗಿರಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವನ್ನು ಮುಂದಿಟ್ಟುಕೊಂಡು ಪಾಲ್ಗೊಳ್ಳುವುದಕ್ಕಿಂತ ಪೂರ್ಣ ಪ್ರಯತ್ನದಿಂದ ಮುಂದುವರಿಯಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಪದಕ ವಿಜೇತೆ ಯುವಸಾಧಕಿ ಮಧುಶ್ರೀ ಮಿತ್ರ ಪೆರ್ಲ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿ, ಯುವವಿಭಾಗದ ನೇತೃತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಜರಗಿದ ಪ್ರತಿಭಾ ಪ್ರದರ್ಶನ-ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಭಟ್ ಆನೆಪ್ಪಳ್ಳ ಧ್ವಜಾರೋಹಣಗೈದು ಉದ್ಘಾಟಿಸಿ ಶುಭಹಾರೈಸಿದರು. ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಹವ್ಯಕ ಮಹಾಮಂಡಲ ಯುವವಿಭಾಗ ಪ್ರಧಾನ ಕೇಶವ ಪ್ರಕಾಶ ಮುಣ್ಚಿಕ್ಕಾನ, ಮಹಾಮಂಡಲ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಶಿಷ್ಯಮಾಧ್ಯಮ ವಿಭಾಗದ ಗೋವಿಂದ ಭಟ್ ಬಳ್ಳಮೂಲೆ, ಮಂಡಲ ಉಪಾಧ್ಯಕ್ಷ ನಾರಾಯಣ ಮೂರ್ತಿ ಕೊಡಗು, ಮುಳ್ಳೇರಿಯ ಮಂಡಲ ವಿಷ್ಣುಗುಪ್ತವಿಶ್ವವಿದ್ಯಾಪೀಠದ ಸಂಚಾಲಕ ಜಯದೇವ ಖಂಡಿಗೆ, ಡಾ.ವೈ.ವಿ.ಕೃಷ್ಣಮೂರ್ತಿ, ಕುಸುಮ ಪೆರ್ಮುಖ, ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ವಿವಿಧ ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಪಾಲ್ಗೊಂಡಿದ್ದರು. ಯುವತಿ ವಿಭಾಗದ ಸೌಂದರ್ಯ ಕೊಲ್ಲಂಪಾರೆ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ ಸ್ವಾಗತಿಸಿ, ಯುವವಿಭಾಗ ಪ್ರಧಾನ ಡಾ. ಶ್ರೀಶಕುಮಾರ ಪಂಜಿತ್ತಡ್ಕ ವಂದಿಸಿದರು. ವಿವಿಧ ಶಾಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಮುಳ್ಳೇರಿಯ ಮಂಡಲದ ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಸಹಕರಿಸಿದರು. ವಿವಿಧ ವಲಯಗಳ ಸ್ಪರ್ಧೆಗಳು ಹಾಗೂ ಪದಾಧಿಕಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.