ನವದೆಹಲಿ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಕಾರಣ ಅನೇಕ ಜನ ಸಾವನ್ನಪ್ಪುತ್ತಿದ್ದು, ದ್ವಿಚಕ್ರ ವಾಹನ ತಯಾರಕರು ವಾಹನವನ್ನು ಖರೀದಿಸುವವರಿಗೆ ರಿಯಾಯಿತಿ ಅಥವಾ ಸಮಂಜಸವಾದ ದರದಲ್ಲಿ ಹೆಲ್ಮೆಟ್ ನೀಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, 2022ರಲ್ಲಿ ದೇಶದಲ್ಲಿ ಹೆಲ್ಮೆಟ್ ಧರಿಸದೇ ಇದ್ದ ಅಪಘಾತಗಳಲ್ಲಿ 50,029 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. "ದ್ವಿಚಕ್ರ ವಾಹನ ತಯಾರಕರು ವಾಹನವನ್ನು ಖರೀದಿಸುವವರಿಗೆ ಹೆಲ್ಮೆಟ್‌ಗಳ ಮೇಲೆ ಸ್ವಲ್ಪ ರಿಯಾಯಿತಿ ನೀಡಿದರೆ ನಾವು ಜನರ ಜೀವ ಉಳಿಸಬಹುದು" ಎಂದಿದ್ದಾರೆ.
ಶಾಲಾ ಬಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಭಾರಿ ದಂಡದೊಂದಿಗೆ ಮೋಟಾರು ವಾಹನಗಳತಿದ್ದುಪಡಿ) ಕಾಯಿದೆ-2019 ಜಾರಿಗೆ ಬಂದಿದೆ. ಆದರೆ ಇಂಥಹ ಕಾನೂನುಗಳು ಜಾರಿಯೂ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.
ದೇಶದ ಪ್ರತಿ ತಾಲೂಕಿನಲ್ಲಿ ಡ್ರೈವಿಂಗ್ ಸ್ಕೂಲ್ ಆರಂಭಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಆರೋಗ್ಯ ಸಚಿವಾಲಯ ಒಳಗೊಂಡು ರಚಿಸಲಾದ "ಉದ್ದೇಶಪೂರ್ವಕವಲ್ಲದ ಹಾನಿಯನ್ನು ನಿಯಂತ್ರಿಸುವ ರಾಷ್ಟ್ರೀಯ ತಂತ್ರ" ಎಂಬ ಶೀರ್ಷಿಕೆಯ ಹೊಸ ವರದಿಯಲ್ಲಿ, ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಬಹಳಷ್ಟು ಸಾವುಗಳು ತಮ್ಮದಲ್ಲದ ತಪ್ಪಿಗೆ ಆಗಿವೆ. ಅಂತಹ ಸಾವುನೋವುಗಳಲ್ಲಿ ಶೇ. 43 ಕ್ಕಿಂತ ಹೆಚ್ಚು ಸಾವುಗಳು ಅತಿವೇಗದ ಕಾರಣದಿಂದ ಸಂಭವಿಸಿವೆ ಎಂದು ಗಡ್ಕರಿ ತಿಳಿಸಿದ್ದಾರೆ.