HEALTH TIPS

ಸಮಾನತೆಯ ಸ್ಥಿತಿ ಬಂದಾಗ ಮೀಸಲಾತಿ ರದ್ದತಿಗೆ ಚಿಂತನೆ: ರಾಹುಲ್ ಗಾಂಧಿ

       ವಾಷಿಂಗ್ಟನ್: ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚಿಸಲಿದೆ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದೂ ಅವರು ಹೇಳಿದರು.

         ಪ್ರತಿಷ್ಠಿತ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಅವರು ಈ ಮಾತು ಹೇಳಿದರು.

          'ಹಣಕಾಸಿನ ಅಂಕಿ-ಅಂಶಗಳನ್ನು ಗಮನಿಸಿದಾಗ; ಪ್ರತಿ ₹100ರಲ್ಲಿ ಆದಿವಾಸಿ ಸಮುದಾಯಗಳಿಗೆ ಸಿಗುತ್ತಿರುವುದು 10 ಪೈಸೆ ಮಾತ್ರ, ದಲಿತರಿಗೆ ಸಿಗುತ್ತಿರುವುದು ₹5, ಒಬಿಸಿಗಳಿಗೆ ಕೂಡ ಸರಿಸುಮಾರು ಇಷ್ಟೇ ಮೊತ್ತ ಸಿಗುತ್ತಿದೆ ಎಂಬುದು ಗೊತ್ತಾಗುತ್ತದೆ. ಈ ಸಮುದಾಯಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಸಿಗುತ್ತಿಲ್ಲ ಎಂಬುದು ವಾಸ್ತವ' ಎಂದರು.

            'ದೇಶದ ಶೇ 90ರಷ್ಟು ಮಂದಿಗೆ ಪಾಲುದಾರಿಕೆಯ ಅವಕಾಶ ಸಿಗುತ್ತಿಲ್ಲ. ಭಾರತದ ‍ಉದ್ಯಮಿಗಳ ಪಟ್ಟಿಯನ್ನು ಗಮನಿಸಿ. ಆದಿವಾಸಿ ಸಮುದಾಯಗಳಿಗೆ ಸೇರಿದವರ ಹೆಸರನ್ನು ತೋರಿಸಿ, ದಲಿತರ ಹೆಸರು ತೋರಿಸಿ, ಒಬಿಸಿ ಹೆಸರು ತೋರಿಸಿ. ಮುಂಚೂಣಿ 200 ಉದ್ಯಮಿಗಳ ಪೈಕಿ ಒಬಿಸಿಗೆ ಸೇರಿದ ಒಬ್ಬರು ಮಾತ್ರ ಇದ್ದಾರೆ. ಒಬಿಸಿಗೆ ಸೇರಿದವರ ಸಂಖ್ಯೆಯು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿದೆ. ಆದರೆ ನಾವು ರೋಗಲಕ್ಷಣಕ್ಕೆ ಚಿಕಿತ್ಸೆ ನೀಡುತ್ತಿಲ್ಲ' ಎಂದು ಹೇಳಿದರು.

         ಏಕರೂಪಿ ನಾಗರಿಕ ಸಂಹಿತೆ ಕುರಿತ ಪ್ರಶ್ನೆಗೆ ರಾಹುಲ್ ಅವರು, ಆ ಬಗ್ಗೆ ಬಿಜೆಪಿಯ ಪ್ರಸ್ತಾವ ಏನು ಎಂಬುದು ಗೊತ್ತಾದ ನಂತರವೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. 'ಬಿಜೆಪಿಯವರು ಏಕರೂಪಿ ನಾಗರಿಕ ಸಂಹಿತೆಯನ್ನು ಪ್ರಸ್ತಾಪಿಸಿದ್ದಾರೆ. ಅದನ್ನು ನಾನು ಗಮನಿಸಿಲ್ಲ. ಅವರು ಏನು ಮಾತನಾಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತ ನಾಡುವುದರಲ್ಲಿ ಅರ್ಥವಿಲ್ಲ. ಅವರು ಅದನ್ನು ಬಹಿರಂಗಪಡಿಸಿದಾಗ ಮಾತ್ರ ಪರಿಶೀಲಿಸಿ, ಪ್ರತಿಕ್ರಿಯೆ ನೀಡುವೆ' ಎಂದರು.

'ಇಂಡಿಯಾ' ಮೈತ್ರಿಕೂಟದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಇದ್ದರೂ, ಹಲವು ವಿಷಯಗಳಲ್ಲಿ ಸಹಮತ ಕೂಡ ಇದೆ ಎಂದರು. 'ಜಾತಿಗಣತಿ ವಿಚಾರದಲ್ಲಿ ನಮ್ಮಲ್ಲಿ ಬಹುತೇಕರಲ್ಲಿ ಸಹಮತವಿದೆ. ಇಬ್ಬರು ಉದ್ಯಮಿಗಳು, ಅಂದರೆ ಅಂಬಾನಿ ಮತ್ತು ಅದಾನಿ, ಭಾರತದ ಅಷ್ಟೂ ಉದ್ಯಮ ಗಳನ್ನು ನಡೆಸುವಂತಾಗಬಾರದು ಎಂಬ ವಿಚಾರದಲ್ಲಿಯೂ ಸಹಮತ ಇದೆ' ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ವಿರುದ್ಧ ಮುಂದುವರಿದ ವಾಗ್ದಾಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಕೆಲವು ಧರ್ಮಗಳು, ಕೆಲವು ಭಾಷೆಗಳು ಮತ್ತು ಕೆಲವು ಸಮುದಾಯಗಳು ಇತರರಿಗಿಂತ ಕೀಳು ಎಂದು ಭಾವಿಸುತ್ತದೆ ರಾಹುಲ್ ದೂರಿದರು. ಭಾರತದಲ್ಲಿನ ಹೋರಾಟವು ಈ ವಿಚಾರದ ಕುರಿತಾಗಿದೆಯೇ ವಿನಾ ಅದು ರಾಜಕೀಯಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದರು.

       ಇಲ್ಲಿನ ಹಂಡನ್‌ನಲ್ಲಿ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಿಖ್ ಸಮುದಾಯದವರೊಬ್ಬರನ್ನು ಉದ್ದೇಶಿಸಿ, 'ಟರ್ಬನ್ ಸುತ್ತಿಕೊಂಡಿರುವ ನಿಮ್ಮ ಹೆಸರೇನು' ಎಂದು ಕೇಳಿದರು.

            'ಸಿಖ್ಖರೊಬ್ಬರಿಗೆ ಭಾರತದಲ್ಲಿ ಟರ್ಬನ್ ಧರಿಸಲು ಅವಕಾಶ ಇದೆಯೇ? ಈ ವಿಷಯವಾಗಿ ಹೋರಾಟ ನಡೆದಿದೆ. ಸಿಖ್ಖರಾಗಿ ಅವರಿಗೆ ಗುರುದ್ವಾರಕ್ಕೆ ಹೋಗಲು ಸಾಧ್ಯವೇ? ಇದಕ್ಕೂ ಹೋರಾಟ ನಡೆದೇ ಇದೆ. ಎಲ್ಲ ಧರ್ಮಗಳ ವಿಚಾರದಲ್ಲಿಯೂ ಇಂತಹುದು ಆಗುತ್ತಿದೆ' ಎಂದು ರಾಹುಲ್ ಪ್ರತಿಪಾದಿಸಿದರು.

              ಆರ್‌ಎಸ್‌ಎಸ್‌ನ ನೀತಿಗಳು ಹಾಗೂ ದೇಶದ ಕುರಿತು ಆ ಸಂಘಟನೆ ಹೊಂದಿರುವ ದೃಷ್ಟಿಕೋನವನ್ನು ಟೀಕಿಸಿದ ರಾಹುಲ್, 'ಕೆಲವು ರಾಜ್ಯಗಳು ಇತರ ರಾಜ್ಯಗಳಿಗಿಂತ ಕೀಳು ಎಂದು ಆರ್‌ಎಸ್‌ಎಸ್‌ ಹೇಳುತ್ತದೆ. ಕೆಲವು ಭಾಷೆಗಳು ಇತರ ಭಾಷೆಗಳಿಗಿಂತ ಕೀಳು ಎನ್ನುತ್ತದೆ. ಕೆಲವು ಧರ್ಮಗಳು ಇತರ ಧರ್ಮಗಳಿಗಿಂತ ಕೀಳು ಎನ್ನುತ್ತದೆ. ಕೆಲವು ಸಮುದಾಯಗಳು ಇತರ ಧರ್ಮಗಳಿಗಿಂತ ಕೀಳು ಎನ್ನುತ್ತದೆ. ಇದರ ಬಗೆಗೂ ಹೋರಾಟ ನಡೆದಿದೆ' ಎಂದರು.


'...ಇದು ಆರ್‌ಎಸ್‌ಎಸ್‌ನ ಸಿದ್ಧಾಂತ. ತಮಿಳು, ಮರಾಠಿ, ಬಂಗಾಳಿ, ಮಣಿಪುರಿ. ಇವೆಲ್ಲ ಕೀಳು ಭಾಷೆಗಳು. ಹೋರಾಟವು ಇದರ ಬಗ್ಗೆ ಇದೆ' ಎಂದು ಅವರು ಹೇಳಿದರು. ಬಿಜೆಪಿಯು ಭಾರತವನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಅವರು ದೂರಿದರು.

          ಜಾರ್ಜ್‌ಟೌನ್‌ ವಿ.ವಿಯಲ್ಲಿ ರಾಹುಲ್ ಹೇಳಿದ್ದು ನರೇಂದ್ರ ಮೋದಿ ಸೃಷ್ಟಿಸಿದ್ದ ಭೀತಿಯು ಲೋಕಸಭಾ ಚುನಾವಣೆಯ ಫಲಿತಾಂಶ ‍ಪ್ರಕಟವಾದ ನಂತರದಲ್ಲಿ ಇಲ್ಲವಾಗಿದೆ. ಈ ಭೀತಿ ಸೃಷ್ಟಿಸಲು ವರ್ಷಗಳೇ ಬೇಕಾಗಿದ್ದವು. ಆದರೆ ಅದು ಒಂದೇ ಕ್ಷಣದಲ್ಲಿ ಇಲ್ಲವಾಯಿತು.

  •          ಮೋದಿ ಅವರ ಕುರಿತ ಪರಿಕಲ್ಪನೆ, ಅಂದರೆ 56 ಇಂಚುಗಳ ಎದೆ, ದೇವರ ಜೊತೆ ನೇರ ಸಂಭಾಷಣೆ ಇಂಥವೆಲ್ಲ ಮಾಯವಾದವು.

  •              ಲೋಕಸಭಾ ಚುನಾವಣೆಯು ಮುಕ್ತವಾಗಿ ನಡೆದಿರಲಿಲ್ಲ. ಬಹಳ ನಿಯಂತ್ರಿತವಾಗಿ ಅದು ನಡೆದಿತ್ತು. ಚುನಾವಣೆ ಮುಕ್ತವಾಗಿ ಇದ್ದಿದ್ದರೆ ಬಿಜೆಪಿಯು 246 ಸೀಟುಗಳ ಸನಿಹಕ್ಕೆ ಬರುತ್ತಿತ್ತು ಎಂದೂ ನಾನು ಭಾವಿಸಿಲ್ಲ. ಬಿಜೆಪಿಗೆ ಆರ್ಥಿಕವಾಗಿ ಬಹಳ ಅನುಕೂಲಗಳಿದ್ದವು.

  • ಚುನಾವಣಾ ಆಯೋಗವು ಬಿಜೆಪಿಗೆ ಬೇಕಿದ್ದುದನ್ನು ಮಾಡುತ್ತಿತ್ತು. ಮೋದಿ ಅವರಿಗೆ ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರಲು ಅನುಕೂಲವಾಗುವ ರೀತಿಯಲ್ಲಿ ಇಡೀ ಚುನಾವಣಾ ಪ್ರಚಾರವನ್ನು ರೂಪಿಸಲಾಯಿತು.

  •               ಕಾಂಗ್ರೆಸ್ ಪಕ್ಷವು ತನ್ನ ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದರೂ ಚುನಾವಣೆ ಎದುರಿಸಿತು, ಮೋದಿ ಕುರಿತ ಪರಿಕಲ್ಪನೆಯೊಂದನ್ನು ಧ್ವಂಸಗೊಳಿಸಿತು. ಮೋದಿ ಅವರು ಮಾನಸಿಕವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಇವೆಲ್ಲ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗುತ್ತಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries