ನವದೆಹಲಿ: 'ಕ್ವಾಡ್' ಶೃಂಗದಲ್ಲಿ ಭಾಗಿಯಾಗಲು ಅಮೆರಿಕಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಬೈಡನ್ ಅವರ ನಿವಾಸದಲ್ಲಿ ನರೇಂದ್ರ ಮೋದಿ ಮತ್ತು ಜೋ ಬೈಡನ್ ಅವರು ಭಾರತ-ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. ಈ ವೇಳೆ ಮೋದಿ ಅವರ ಜತೆಗಿದ್ದ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳ ಪಟ್ಟಿಯಲ್ಲಿ ಅಜಿತ್ ಡೊಭಾಲ್ ಅವರು ಹೆಸರು ಇರಲಿಲ್ಲ ಎಂದು ತಿಳಿದು ಬಂದಿದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್, ಅಮೆರಿಕ ವಿದೇಶಾಂಗ ಸಚಿವ ಆಯಂಟನಿ ಬ್ಲಿಂಕೆನ್, ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಂ ಮಿಸ್ರಿ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಶ್ವೇತಭವನ ಒದಗಿಸಿದ ನವದೆಹಲಿಯ ಪ್ರತಿನಿಧಿಗಳ ಪಟ್ಟಿಯಲ್ಲಿ ಡೊಭಾಲ್ ಹೆಸರು ಇರಲಿಲ್ಲ. ಪ್ರಧಾನ ಮಂತ್ರಿಗಳ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಉಪಸ್ಥಿತಿ ಸಾಮಾನ್ಯ.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಜಿತ್ ಡೊಭಾಲ್ ಅವರು ಅಮೆರಿಕಕ್ಕೆ ಪ್ರಯಾಣಿಸಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತ, ಡೊಭಾಲ್ ವಿರುದ್ಧ ಅಮೆರಿಕ ಕೋರ್ಟ್ ಸಮನ್ಸ್
ನ್ಯೂಯಾರ್ಕ್: 'ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು' ಎಂದು ಆರೋಪಿಸಿ, ಭಾರತ ಸರ್ಕಾರ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ವಿರುದ್ಧ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ದಾಖಲಿಸಿರುವ ದಾವೆಗೆ ಸಂಬಂಧಿಸಿ, ನ್ಯೂಯಾರ್ಕ್ ಸೌತ್ ಡಿಸ್ಟ್ರಿಕ್ಸ್ ನ್ಯಾಯಾಲಯವು ಈಚೆಗೆ ಸಮನ್ಸ್ ಜಾರಿ ಮಾಡಿತ್ತು.
'ರಾ' (ಆರ್ ಆಯಂಡ್ ಎ ಡಬ್ಲ್ಯು) ಮಾಜಿ ಮುಖ್ಯಸ್ಥ ಸಾಮಂತ್ ಗೋಯಲ್, ಏಜೆಂಟ್ ವಿಕ್ರಮ್ ಯಾದವ್ ಹಾಗೂ ಸದ್ಯ ಅಮೆರಿಕ ಜೈಲಿನಲ್ಲಿರುವ ಭಾರತೀಯ ಉದ್ಯಮಿ ನಿಖಿಲ್ ಗುಪ್ತ ಅವರ ಹೆಸರುಗಳನ್ನೂ ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆ.21ರಿಂದ 23ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದಕ್ಕೂ ಮುನ್ನವೇ ಈ ಬೆಳವಣಿಗೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, 'ಈ ಆರೋಪಗಳು ಅನಪೇಕ್ಷಿತ ಹಾಗೂ ಆಧಾರರಹಿತ' ಎಂದು ಹೇಳಿದ್ದರು.