ನೀವು ಅಡುಗೆ ಮನೆಯಲ್ಲಿ ಎಷ್ಟೊಂದು ವಸ್ತುಗಳನ್ನು ಬಳಸಿರುತ್ತೀರಿ. ಅದರಲ್ಲೂ ಪಾತ್ರೆ ಉಜ್ಜಲು ನಾವು ಸ್ಪಂಜುಗಳ ಬಳಸುತ್ತೇವೆ. ಅದಕ್ಕೆ ಯಾವುದಾದರು ಲಿಕ್ವಿಡ್ ಬಳಸಿಕೊಂಡು ಪ್ರಾತ್ರೆಗಳ್ನು ತೊಳೆಯುತ್ತೇವೆ. ಪ್ರತಿ ದಿನ ಹತ್ತಾರು ಬಾರಿ ಈ ಸ್ಪಂಜು ಬಳಸಿ ಪಾತ್ರೆಯನ್ನು ಕ್ಲೀನ್ ಮಾಡುತ್ತೇವೆ.
ಆದ್ರೆ ನಾವು ಪಾತ್ರೆಯಲ್ಲಿ ಉಳಿದ ವಸ್ತುಗಳಿಂದ ಯಾವುದೇ ರೋಗ ರುಜಿನಗಳು, ಬ್ಯಾಕ್ಟೀರಿಯಾ ಹರಡಬಾರದು ಎಂಬ ಕಾರಣಕ್ಕೆ ಈ ಸ್ಪಂಜು ಬಳಸಿ ಪಾತ್ರೆ ಉಜ್ಜಿರುತ್ತೇವೆ. ಆದ್ರೆ ಇದೇ ಸ್ಪಂಜುಗಳು ನಿಮಗೆ ಕಾಯಿಲೆ ಬೀಳಿಸುತ್ತಿವೆ ಎಂಬುದು ಈಗ ಅಧ್ಯಯನದಿಂದ ತಿಳಿದುಬಂದಿದೆ.
ಅಡುಗೆಮನೆಯ ಸ್ಪಂಜುಗಳು ಟಾಯ್ಲೆಟ್ ಬೌಲ್‌ಗಳಿಗಿಂತ ಹೆಚ್ಚಿನ ಬ್ಯಾಕ್ಟೀರಿಯಾವನ್ನು ಹೊಂದಿರುವ ಸಾಧ್ಯತೆ ಇರಲಿದೆ ಎಂದು ಅಧ್ಯಯನ ತಿಳಿಸಿದೆ. ಹಾಗೆಯೇ ಮನಯ ಅತ್ಯಂತ ಕಲುಷಿತವಾದ ವಸ್ತುಗಳಲ್ಲಿ ಈ ಸ್ಪಂಜುಗಳು ಒಂದಾಗಿದೆ. ಈ ಸ್ಪಂಜಿನ ಒಂದು ಘನ ಸೆಂ.ಮೀಟರ್ ಅಳತೆಯಲ್ಲಿ ಸರಿ ಸುಮಾರು 54 ಶತಕೋಟಿ ಬ್ಯಾಕ್ಟೀರಿಯಾಗಳ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ನಾವು ಪ್ರತಿ ಬಾರಿ ಈ ಸ್ಪಂಜಿನ ಸಂಪರ್ಕಕ್ಕೆ ಬಂದಾಗ ಈ ಬ್ಯಾಕ್ಟೀರಿಯಾಗಳು ನಮಗೂ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಡ್ಯೂಕ್ ವಿಶ್ವವಿದ್ಯಾನಿಲಯದ ಬಯೋಮೆಡಿಕಲ್ ಇಂಜಿನಿಯರ್‌ಗಳು ಸ್ಪಂಜುಗಳು ತಮ್ಮ ಸರಂಧ್ರ ಮತ್ತು ತೇವಾಂಶದ ರಚನೆಯಿಂದಾಗಿ ಸೂಕ್ಷ್ಮಜೀವಿಯ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ ಎಂದು ದೃಢಪಡಿಸಿದ್ದಾರೆ. ಅಡುಗೆ ಮನೆಯಲ್ಲಿ ಬಳಸುವ ಈ ಸ್ಪಂಜುಗಳು ಪ್ರಯೋಗಾಲಯಗಳಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಗೆ ಬಳಸುವ ಸಾಂಪ್ರದಾಯಿಕ ಅಗರ್ ಪ್ಲೇಟ್‌ಗಳಿಗಿಂತ ಹೆಚ್ಚಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತವೆ ಎಂದು ಹೇಳಲಾಗಿದೆ.
ಅನೈರ್ಮಲ್ಯ ಹಾಗೂ ಫುಡ್ ಪಾಯಿಸನ್‌ಗೆ ಸಂಬಂಧಿಸಿದ ಕಾಯಿಲೆಗಳಿಗೆ ಒಳಗಾಗುವ ಹಿಂದೆ ಈ ಸ್ಪಂಜುಗಳ ಕಾರಣವೂ ಇರಬಹುದು. ಹಾಗೆ ಗ್ಯಾಸ್ಟ್ರೋಎಂಟರೈಟಿಸ್‌ಗೆ ಕಾರಣವಾಗಬಹುದು ಆದರೆ ಮೆನಿಂಜೈಟಿಸ್, ನ್ಯುಮೋನಿಯಾ ಮತ್ತು ಸೆಪ್ಟಿಸೆಮಿಯಾ ನಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಹಾಗಾದರೆ ಈ ಪಾತ್ರೆ ಉಜ್ಜುವ ಸ್ಪಂಜಿನಲ್ಲಿ ಯಾವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರಲಿವೆ ಎಂಬುದನ್ನು ತಿಳಿದುಕೊಳ್ಳಿ.
ಕ್ಯಾಂಪಿಲೋಬ್ಯಾಕ್ಟರ್: ಸಾಮಾನ್ಯವಾಗಿ ಕೋಳಿಯ ಹಸಿ ಮಾಂಸದಲ್ಲಿ ಈ ಕ್ಯಾಂಪಿಲೋಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಇದು ಅತಿಸಾರ, ಹೊಟ್ಟೆ ನೋವು, ಜ್ವರ, ಬಾಕರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಮಾಂಸವನ್ನು ಚೆನ್ನಾಗಿ ಕುದಿಸಿ, ಬೇಯಿಸಿ ತಿನ್ನಬೇಕು ಎನ್ನುತ್ತಾರೆ. ಈ ಬ್ಯಾಕ್ಟೀರಿಯಾ ಈ ಸ್ಪಂಜುಗಳಲ್ಲಿ ಕಂಡುಬರುತ್ತದೆ.
ಇ. ಕೊಲಿ: ಈ ಬ್ಯಾಕ್ಟೀರಿಯಾ ಫುಡ್ ಪಾಯಿಸನ್‌ಗೆ ಕಾರಣವಾಗುತ್ತದೆ. ಹೊಟ್ಟೆ ನೋವು, ಅತಿಸಾರ, ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.
ಕ್ಲೆಬ್ಸಿಯೆಲ್ಲಾ: ಅನೇಕ ಪ್ರತಿಜೀವಕಗಳಿಗೆ ನಿರೋಧಕವಾದ ಅವಕಾಶವಾದಿ ರೋಗಕಾರಕ ಇದಾಗಿದೆ. ಕ್ಲೆಬ್ಸಿಲ್ಲಾ ನ್ಯುಮೋನಿಯಾ ಮತ್ತು ಮೂತ್ರದ ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಆಗಿದೆ. ಇದು ಸ್ಪಂಜಿನಲ್ಲಿ ಅಡಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ಮೊರಾಕ್ಸೆಲ್ಲಾ ಓಸ್ಲೋಯೆನ್ಸಿಸ್: ಪ್ರಾಥಮಿಕವಾಗಿ ನಿಮ್ಮ ಬಟ್ಟೆಯು ಒಂದು ರೀತಿಯ ವಾಸನೆ ಬರಲು ಈ ಬ್ಯಾಕ್ಟೀರಿಯಾ ಕಾರಣವಾಗಿರುತ್ತದೆ. ಈ ಬ್ಯಾಕ್ಟೀರಿಯಾವು ಚರ್ಮದ ಪರಿಸ್ಥಿತಿಗಳು ಮತ್ತು ಸಂಧಿವಾತ ಸೇರಿದಂತೆ ಸೋಂಕುಗಳನ್ನು ಪ್ರಚೋದಿಸುತ್ತದೆ.
ಸಾಲ್ಮೊನೆಲ್ಲಾ: ಮೂಲತಃ ಈ ಬ್ಯಾಕ್ಟೀರಿಯಾ ಸ್ಪಂಜಿನಲ್ಲಿ ಬೆಳೆಯುತ್ತದೆ. ಕಲುಷಿತ ಆಹಾರ ಮತ್ತು ನೀರಿನಿಂದ ಆಗಾಗ ನೀವು ಅನಾರೊಗ್ಯಕ್ಕೆ ಒಳಗಾದರೆ ಈ ಬ್ಯಾಕ್ಟೀರಿಯಾ ಸಹ ಕಾರಣವಾಗಿರಬಹುದು. ಇದು ಅತಿಸಾರ, ಜ್ವರ, ಕಿಬ್ಬೊಟ್ಟೆ ನೋವು, ತಲೆನೋವಿಗೂ ಕಾರಣವಾಗುವ ಬ್ಯಾಕ್ಟೀರಿಯಾ ಆಗಿದೆ.
ನೀವು ಈ ಸ್ಪಂಜಿಗೆ ಯಾವಾಗಲು ಸೋಪು ಅಥವಾ ಲಿಕ್ವಿಡ್ ಹಚ್ಚಿರುತ್ತೀರಿ. ಆದ್ರೆ ಇಷ್ಟಾದರೂ ಕೂಡ ಈ ಸ್ಪಂಜಿನಿಂದ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ.