ತಿರುವನಂತಪುರಂ: ಕ್ರಿಕೆಟ್ನಲ್ಲಿ ನಿರಂತರ ವೈಫಲ್ಯ ಅನುಭವಿಸಿರುವ ಸಂಜು ಸ್ಯಾಮ್ಸನ್ ಮತ್ತೆ ಟೀಮ್ ಇಂಡಿಯಾಗೆ ಮರಳುವುದು ಕಷ್ಟ ಅನ್ನೋ ಮಾತುಗಳು ಕೇಳಿಬರುತ್ತಿವೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಅವಕಾಶ ಪಡೆದರೂ ಎರಡರಲ್ಲೂ ಡಕೌಟ್ ಆಗುವ ಮೂಲಕ ಅವಕಾಶ ಕೈಚೆಲ್ಲಿದರು.
ಕಳಪೆ ಪ್ರದರ್ಶನ ಕಾರಣ ದುಲೀಪ್ ಟ್ರೋಫಿಯಿಂದ ಸ್ಯಾಮ್ಸನ್ ಹೆಸರನ್ನು ಕೈಬಿಡಲಾಗಿದೆ. ಇತ್ತ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವದಿಂದಲೂ ಕೆಳಗಿಳಿಸುವ ಊಹಾಪೋಹಗಳು ಹರಿದಾಡುತ್ತಿವೆ.
ಕ್ರಿಕೆಟ್ನಲ್ಲಿ ನಿರಂತರ ವೈಫಲ್ಯ ಕಾಣುತ್ತಿರುವ ಸಂಜು ಸ್ಯಾಮ್ಸನ್ ಇದೀಗ ಬೇರೆ ಕ್ರೀಡೆಯತ್ತ ಗಮನಹರಿಸಿದ್ದಾರೆ. ಹಾಗಂತ ಆ ಕ್ರೀಡೆಯಲ್ಲಿ ಆಡುತ್ತಿಲ್ಲ. ಬದಲಾಗಿ ಉದ್ಯಮದ ದೃಷ್ಟಿಯಿಂದ ಆ ಕ್ರೀಡೆಯತ್ತ ಮುಖಮಾಡಿದ್ದಾರೆ. ಯಾವುದು ಆ ಕ್ರೀಡೆಯೆಂದರೆ ಫುಟ್ಬಾಲ್.
ಸಂಜು ಸ್ಯಾಮ್ಸನ್, ವೃತ್ತಿಪರ ಫುಟ್ಬಾಲ್ ಕ್ಲಬ್ ಮಲಪ್ಪುರಂ ಎಫ್‌ಸಿ ಷೇರುಗಳನ್ನು ಖರೀದಿಸಬಹುದು ಎಂದು ವರದಿಯಾಗಿದೆ. ತಂಡವನ್ನು ಸೇರುವ ಆಸಕ್ತಿಯನ್ನು ಸಂಜು ವ್ಯಕ್ತಪಡಿಸಿದ್ದಾರೆ ಎಂದು ತಂಡದ ಕೋ-ಆರ್ಡಿನೇಟರ್ ಮತ್ತು ಪ್ರಮೋಟರ್ ಆಶಿಕ್ ಕೈನಿಕರ ಬಹಿರಂಗಪಡಿಸಿದ್ದಾರೆ. ಮಲಪ್ಪುರಂ ಎಫ್‌ಸಿ, ಕೇರಳ ಸೂಪರ್ ಲೀಗ್ ಕ್ಲಬ್ ಆಗಿದೆ.
ಸೆಲೆಬ್ರಿಟಿಗಳು ಕ್ರೀಡೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಂಜು ಸಹ ಕ್ರೀಡೆಯಲ್ಲಿ ಹಣ ಹೂಡುತ್ತಿದ್ದಾರೆ. ಈಗಾಗಲೇ ನಟ ಪೃಥ್ವಿರಾಜ್ ಅವರು ಫೋರ್ಜಾ ಕೊಚ್ಚಿ ಮತ್ತು ಆಸಿಫ್ ಅಲಿ ಅವರು ಕಣ್ಣೂರು ವಾರಿಯರ್ಸ್ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ. ಸೆಪ್ಟೆಂಬರ್ 7ರಿಂದ ಆರಂಭವಾಗಲಿರುವ ಲೀಗ್‌ನಲ್ಲಿ ಮಲಪ್ಪುರಂ ತಂಡ ಕೊಚ್ಚಿ ತಂಡವನ್ನು ಎದುರಿಸಲಿದೆ.
ಅಂದಹಾಗೆ ಸಂಜು ಅವರು ಮಲಪ್ಪುರಂ ಎಫ್‌ಸಿಗೆ ಹೂಡಿಕೆದಾರರಾಗಿ ಅಥವಾ ತಂಡದ ರಾಯಭಾರಿಯಾಗಿ ಸೇರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದೇ ಸಂದರ್ಭದಲ್ಲಿ ಈ ಬಗ್ಗೆ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.