ಕೋಲ್ಕತ್ತ: ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂಬ ಪಟ್ಟನ್ನು ಕಿರಿಯ ವೈದ್ಯರು ಸಡಿಲಿಸದ ಪರಿಣಾಮ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಶನಿವಾರ ನಿಗದಿತ ಸಮಯಕ್ಕೆ ಸಭೆ ನಡೆಯಲಿಲ್ಲ. ಇದರಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರಿದಿದೆ.
ಕೋಲ್ಕತ್ತ: ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂಬ ಪಟ್ಟನ್ನು ಕಿರಿಯ ವೈದ್ಯರು ಸಡಿಲಿಸದ ಪರಿಣಾಮ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಶನಿವಾರ ನಿಗದಿತ ಸಮಯಕ್ಕೆ ಸಭೆ ನಡೆಯಲಿಲ್ಲ. ಇದರಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರಿದಿದೆ.
ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣದ ಕಾರಣಕ್ಕೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಅವರ ನಿವಾಸದಲ್ಲಿ ಶನಿವಾರ ಸಂಜೆ 6ಕ್ಕೆ ಸಭೆ ನಿಗದಿಯಾಗಿತ್ತು. ಮಮತಾ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಿದ್ದರು. 30 ಮಂದಿಯಿದ್ದ ವೈದ್ಯರ ನಿಯೋಗ ಸಂಜೆ 6.45ರ ವೇಳೆಗೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ತಲುಪಿತು. ಆದರೆ ರಾತ್ರಿಯವರೆಗೂ ಸಭೆ ಆರಂಭವಾಗಲಿಲ್ಲ.
ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂಬ ಬೇಡಿಕೆಯಿಂದ ವೈದ್ಯರು ಹಿಂದೆ ಸರಿಯದೇ ಇದ್ದುದು ಸಭೆ ನಿಗದಿಯ ಸಮಯಕ್ಕೆ ಆರಂಭವಾಗದಿರಲು ಕಾರಣ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಅವರು ಡಿಜಿಪಿ ರಾಜೀವ್ ಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರೊಂದಿಗೆ ಸಭೆಗಾಗಿ ಕಾದು ಕುಳಿತ ಫೋಟೊವನ್ನು ಸಚಿವಾಲಯ ಬಿಡುಗಡೆಗೊಳಿಸಿದೆ.
'ಎಲ್ಲರೂ ಒಳಗೆ ಬಂದು ಸಭೆಗೆ ಹಾಜರಾಗುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ. ಈ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಸಭೆಯ ನೇರ ಪ್ರಸಾರ ಸಾಧ್ಯವಿಲ್ಲ. ಸಭೆಯ ವಿಡಿಯೊ ರೆಕಾರ್ಡ್ ನಾವೇ ಮಾಡಿ, ಸುಪ್ರೀಂ ಕೋರ್ಟ್ ಅನುಮತಿ ಪಡೆದ ಬಳಿಕ ನಿಮಗೆ ನೀಡುತ್ತೇವೆ' ಎಂದು ಮಮತಾ ಅವರು ವೈದ್ಯರಿಗೆ ಮನವಿ ಮಾಡಿದರು.
'ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ನೀವು ಹೇಳಿದ್ದೀರಿ. ಆದ್ದರಿಂದ ನಾನು ಕಾಯುತ್ತಿದ್ದೇನೆ. ನನ್ನನ್ನು ಯಾಕೆ ಈ ರೀತಿ ಅವಮಾನಿಸುತ್ತಿದ್ದೀರಿ? ಈ ಹಿಂದೆ ಮೂರು ಸಲ ನಾನು ನಿಮಗಾಗಿ ಕಾದು ಕುಳಿತಿದ್ದೆ. ಅದರೆ ನೀವು ಸಭೆಗೆ ಬರಲಿಲ್ಲ. ದಯವಿಟ್ಟು ಅವಮಾನಿಸಬೇಡಿ' ಎಂದು ಕೇಳಿಕೊಂಡರು.