HEALTH TIPS

ಚೀನಾ ಸಂಘರ್ಷ | ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ: ರಾಹುಲ್ ಗಾಂಧಿ

 ವಾಷಿಂಗ್ಟನ್: ಚೀನಾ ಜೊತೆಗಿನ ಸಂಘರ್ಷವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಿಭಾಯಿಸಿದ ಬಗೆಯ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆರೆಯ ದೇಶದ ಸೈನಿಕರು ಭಾರತದ ನಾಲ್ಕು ಸಾವಿರ ಚದರ ಕಿ.ಮೀ. ಪ್ರದೇಶವನ್ನು 'ಆಕ್ರಮಿಸಿಕೊಂಡಿರುವುದು ಒಂದು ದುರಂತ' ಎಂದು ರಾಹುಲ್ ಅವರು ಇಲ್ಲಿ ಸುದ್ದಿಗಾರರ ಬಳಿ ಹೇಳಿದ್ದಾರೆ.

ವಿದೇಶಾಂಗ ನೀತಿಗಳ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಜೊತೆ ಬಹುತೇಕ ಸಹಮತ ಹೊಂದಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕವು ಹಸ್ತಕ್ಷೇಪ ನಡೆಸುವುದನ್ನು ತಾವು ಬಯಸುವುದಿಲ್ಲ ಎಂದಿದ್ದಾರೆ.

'ಮೋದಿ ನೇತೃತ್ವದಲ್ಲಿ ಭಾರತವು ಅಮೆರಿಕ-ಚೀನಾ ಸ್ಪರ್ಧೆಯನ್ನು ಚೆನ್ನಾಗಿ ನಿಭಾಯಿಸಿದೆ ಎಂದು ಭಾವಿಸಿದ್ದೀರಾ' ಎಂದು ರಾಹುಲ್ ಅವರನ್ನು ಪ್ರಶ್ನಿಸಿದಾಗ, 'ನಮ್ಮ 4,000 ಚದರ ಕಿ.ಮೀ. ಪ್ರದೇಶದಲ್ಲಿ ಚೀನಾದ ಸೈನಿಕರು ಇರುವುದು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವುದಕ್ಕೆ ಸಮ ಎಂದು ನೀವು ಹೇಳುವುದಾದರೆ, ಬಹುಶಃ ಅದೇ ಸರಿಯಿರಬಹುದು. ದೆಹಲಿಯಷ್ಟು ವಿಸ್ತಾರವಾದ ನಮ್ಮ ನೆಲವನ್ನು ಚೀನಾದ ಸೈನಿಕರು ಆಕ್ರಮಿಸಿಕೊಂಡಿದ್ದಾರೆ... ಈ ಬಗ್ಗೆ ಬರೆಯಲು ಮಾಧ್ಯಮಗಳಿಗೆ ಇಷ್ಟವಿಲ್ಲ' ಎಂದು ಹೇಳಿದ್ದಾರೆ.

'ನೆರೆ ದೇಶವು ನಿಮ್ಮ 4,000 ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡರೆ ಅಮೆರಿಕ ಹೇಗೆ ಪ್ರತಿಕ್ರಿಯಿಸುತ್ತದೆ? ಪರಿಸ್ಥಿತಿಯನ್ನು ತಾನು ಚೆನ್ನಾಗಿ ನಿಭಾಯಿಸಿದ್ದೇನೆ ಎಂದು ಹೇಳಿ ಯಾವುದೇ ಅಧ್ಯಕ್ಷ ಬಚಾವಾಗಲು ಸಾಧ್ಯವೇ? ಹೀಗಾಗಿ, ಮೋದಿ ಅವರು ಚೀನಾ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಚೀನಾದ ಸೈನಿಕರು ನಮ್ಮ ನೆಲದಲ್ಲಿ ಕುಳಿತಿರುವುದಕ್ಕೆ ಕಾರಣಗಳೇ ಇಲ್ಲ' ಎಂದಿದ್ದಾರೆ.

ಪಾಕಿಸ್ತಾನದ ಕುರಿತಾಗಿ ಮೋದಿ ಅವರು ತಳೆದಿರುವ ನಿಲುವನ್ನು ರಾಹುಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಬೆಂಬಲಿಸಿದರು. ಅಮೆರಿಕದ ಜೊತೆಗಿನ ಸಂಬಂಧದ ವಿಚಾರವಾಗಿ 'ಮೋದಿ ಅವರು ನಮ್ಮ ನಿಲುವಿಗೆ ತೀರಾ ಭಿನ್ನವಾಗಿಯೆನೂ ವರ್ತಿಸುತ್ತಿಲ್ಲ' ಎಂದು ಹೇಳಿದ್ದಾರೆ.

'ಭಾರತದಲ್ಲಿ ಪ್ರಜಾತಂತ್ರಕ್ಕಾಗಿ ನಡೆದಿರುವ ಹೋರಾಟವು ಭಾರತೀಯರ ಹೋರಾಟ. ಅದಕ್ಕೂ ಬೇರೆಯವರಿಗೂ ಸಂಬಂಧ ಇಲ್ಲ. ಅದು ನಮ್ಮ ಸಮಸ್ಯೆ. ಅದನ್ನು ನಾವೇ ನೋಡಿಕೊಳ್ಳುತ್ತೇವೆ. ಪ್ರಜಾತಂತ್ರ ಸುರಕ್ಷಿತವಾಗಿದೆಯೇ ಎನ್ನುವುದನ್ನು ನಾವು ಖಾತರಿಪಡಿಸಿಕೊಳ್ಳುತ್ತೇವೆ' ಎಂದಿದ್ದಾರೆ.

ರಾಹುಲ್ ಹೇಳಿದ್ದು...

  • ಕಳೆದ 10 ವರ್ಷಗಳಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆಯು ಭಗ್ನಗೊಳ್ಳುತ್ತಾ ಬಂದಿತ್ತು. ಈಗ ಅದು ಹೋರಾಟ ನಡೆಸುತ್ತಿದೆ

  • ಮಹಾರಾಷ್ಟ್ರ ಸರ್ಕಾರವನ್ನು ನಮ್ಮಿಂದ ಕಿತ್ತುಕೊಂಡಿದ್ದನ್ನು ಕಂಡಿದ್ದೇನೆ. ನಮ್ಮ ಶಾಸಕರು ಇದ್ದಕ್ಕಿದ್ದಂತೆ ಬಿಜೆಪಿ ಶಾಸಕರಾಗಿದ್ದನ್ನೂ ನೋಡಿದ್ದೇನೆ

  • ನಮ್ಮ ಬ್ಯಾಂಕ್‌ ಖಾತೆಗಳು ಸ್ಥಗಿತಗೊಂಡಿದ್ದ ಸ್ಥಿತಿಯಲ್ಲೂ ನಾವು ಚುನಾವಣೆ ಎದುರಿಸಿದೆವು. ಇಂಥದ್ದು ಬೇರೆ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಆಗಿರುವುದನ್ನು ನಾನು ಕಂಡಿಲ್ಲ. ಬಹುಶಃ ಸಿರಿಯಾ ಅಥವಾ ಇರಾಕ್‌ನಲ್ಲಿ ಹೀಗಾಗಿರಬಹುದು

  • ನನ್ನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಭಾರತದ ಇತಿಹಾಸದಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಏಕೈಕ ವ್ಯಕ್ತಿ ನಾನು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries