ನವದೆಹಲಿ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಲ್ಕತ್ತದ ತಾಲಾ ಪೊಲೀಸ್ ಠಾಣೆಯಲ್ಲಿ ಕೆಲ ದಾಖಲೆಗಳನ್ನು 'ತಿದ್ದಲಾಗಿದೆ' ಹಾಗೂ ಕೆಲ 'ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ' ಎಂದು ಸಿಬಿಐ ಬುಧವಾರ ಅರೋಪಿಸಿದೆ.
ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, 'ತಾಲಾ ಠಾಣೆಯ ಸಿ.ಸಿ.ಟಿವಿ ಕ್ಯಾಮೆರಾದ ದೃಶ್ಯಗಳನ್ನು ಜಪ್ತಿ ಮಾಡಿ, ಕೋಲ್ಕತ್ತದಲ್ಲಿರುವ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ' ಎಂದು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ತಾಲಾ ಠಾಣೆಯ ಅಧಿಕಾರಿ ಅಭಿಜಿತ್ ಮಂಡಲ್ ಹಾಗೂ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಿದ್ದಲಾದ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದ ಕುರಿತು ಕೆಲ 'ಹೊಸ/ಹೆಚ್ಚುವರಿ' ಸಂಗತಿಗಳು ವಿಚಾರಣೆ ವೇಳೆ ಬೆಳಕಿಗೆ ಬಂದಿವೆ ಎಂದು ಸಿಬಿಐ ತಿಳಿಸಿದೆ.
ನ್ಯಾಯಾಂಗ ಬಂಧನ: ಪೊಲೀಸ್ ಅಧಿಕಾರಿ ಮಂಡಲ್ ಹಾಗೂ ಮಾಜಿ ಪ್ರಾಂಶುಪಾಲ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯದ ಮುಂದೆ ಬುಧವಾರ ಹಾಜರುಪಡಿಸಿದರು.
ಇಬ್ಬರನ್ನು ಸೆ.30ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತು.