ಕುಂಬಳೆ; ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ, ಬೆಲೆಬಾಳುವ ಮೊಬೈಲ್, ಸ್ಮಾರ್ಟ್ ವಾಚು ಕಳವುಗೈದ ಇಬ್ಬರು ಯುವತಿಯರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ತನಂತಿಟ್ಟ ನಿವಾಸಿಗಳು ಹಾಗೂ ಹೇರೂರಿನಲ್ಲಿ ವಾಸ್ತವ್ಯ ಹೂಡಿರುವ ಜಾನ್ಸಿ ಹಾಗೂ ಬ್ಲೆಸ್ಸಿ ಬಂಧಿತರು.
ಹೇರೂರು ನಿವಾಸಿ ಸೈಫುದ್ದೀನ್ ಎಂಬವರ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿದೆ. ಒಂದು ತಿಂಗಳ ಹಿಂದೆ ಇವರಿಬ್ಬರು ಸೈಫುದ್ದೀನ್ ಮನೆಗೆ ಕೆಲಸಕ್ಕೆ ಆಗಮಿಸಿದ್ದ ಸಂದರ್ಭ ಒಂದು ಮೊಬೈಲ್ ಕಳವಿಗೀಡಾಗಿದ್ದು, ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ನಂತರ ಇವರಿಬ್ಬರೂ ಆ. 24ಹಾಗೂ 25ರಂದು ಕೆಲಸಕ್ಕೆ ಆಗಮಿಸಿದ್ದ ಸಂದರ್ಭ ಮನೆಯಿಂದ ಮೂರೂ ಮುಕ್ಕಳು ಪವನಿನ ಚಿನ್ನಾಭರಣ, ಬೆಲೆಬಾಳುವ ಮೊಬೈಲ್ ಹಾಗೂ ಸ್ಮಾರ್ಟ್ ವಾಚು ನಾಪತ್ತೆಯಾಗಿತ್ತು. ಎರಡನೇ ಬಾರಿಗೆ ಮನೆಕೆಲಸಕ್ಕೆ ಬಂದಿದ್ದಾಗ ಕಳವಾಗಿರುವುದರಿಂದ ಇಬ್ಬರು ಯುವತಿಯರ ಮೇಲೆ ಸಂಶಯ ಮೂಡಿದ್ದು, ಗುರುವಾರದಂದು ಮತ್ತೆ ಇವರನ್ನು ಕೆಲಸಕ್ಕೆಂದು ಕರೆಸಿ, ಮನೆಯವರು ವಿಚಾರಿಸಿದಾಗ ಕಳವುಗೈದಿರುವ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಕುಂಬಳೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.