ಬದಿಯಡ್ಕ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಎಡನೀರು ಸನಿಹ ಎದುರ್‍ತೋಡಿನಲ್ಲಿ ಅನಿಲ ಸಾಗಾಟದ ಟ್ಯಾಂಕರ್ ಪಲ್ಟಿಯಾಗಿದ್ದು, ಭಾರಿ ದುರಂತ ತಪ್ಪಿದೆ. ಬುಧವಾರ ಮಧ್ಯಾಹ್ನ ಎದುರ್ತೋಡಿನ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ವಾಹನ ಸಂಚಾರ ತಾಸುಗಳ ಕಾಲ ಸ್ಥಗಿತಗೊಂಡಿತ್ತು. ಮಂಗಳೂರಿನಿಂದ ಕೋಯಿಕ್ಕೋಡಿಗೆ ತೆರಳುತ್ತಿದ್ದ ಟ್ಯಾಂಕರ್ ರಸ್ತೆಗೆ ಅಡ್ಡ ಪಲ್ಟಿಯಾಗಿದೆ.
ಕಾಸರಗೋಡಿನಿಂದ ಚಂದ್ರಗಿರಿ ಹಾದಿಯಾಗಿ ಕಾಞಂಗಾಡು ಕೆಎಸ್‍ಟಿಪಿ ರಸ್ತೆ ಚಂದ್ರಗಿರಿ ಸೇತುವೆ ವರೆಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಸೇರಿದಂತೆ ಘನ ವಾಹನಗಳನ್ನು ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಚೆರ್ಕಳ ಮೂಲಕ ಹೆದ್ದಾರಿಯಲ್ಲಿ ಬಿಡಲಾಗುತ್ತಿದೆ. ಪಲ್ಟಿಯಾದ ಟ್ಯಾಂಕರ್‍ನಿಂದ ಅನಿಲ ಸೋರಿಕೆಯುಂಟಾಗಿಲ್ಲ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ. ಬೇರೊಂದು ಟ್ಯಾಂಕರ್ ಗೆ ಅನಿಲ ರವಾನಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.