ನವದೆಹಲಿ: 17ನೇ ಲೋಕಸಭೆ ರಚನೆಯಾಗಿ ನಾಲ್ಕು ತಿಂಗಳು ಕಳೆದ ನಂತರ ಕೇಂದ್ರ ಸರ್ಕಾರವು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಗುರುವಾರ ತಡರಾತ್ರಿ ಘೋಷಿಸಿದೆ.
ಗೃಹ ಇಲಾಖೆ (ರಾಧಾ ಮೋಹನ್ ದಾಸ್ ಅಗರವಾಲ್), ರಕ್ಷಣೆ (ರಾಧಾ ಮೋಹನ್ ಸಿಂಗ್), ಹಣಕಾಸು (ಭರ್ತೃಹರಿ ಮಹತಾಬ್), ಸಂವಹನ ಮತ್ತು ಐಟಿ (ನಿಶಿಕಾಂತ್ ದುಬೇ), ರೈಲ್ವೆ (ಸಿ.ಎಂ. ರಮೇಶ್), ಕಾರ್ಮಿಕ, ಜವಳಿ ಮತ್ತು ಕೌಶಲಾಭಿವೃದ್ಧಿ (ಬಸವರಾಜ ಬೊಮ್ಮಾಯಿ), ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ಪಿ.ಸಿ.ಮೋಹನ್) ಹಾಗೂ ಜಲ ಸಂಪನ್ಮೂಲ (ರಾಜೀವ್ ಪ್ರತಾಪ್) ಸಮಿತಿಗಳ ಅಧ್ಯಕ್ಷತೆಯನ್ನು ಬಿಜೆಪಿ ಉಳಿಸಿಕೊಂಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಮಿತಿಯ ಸದಸ್ಯರಾಗಿದ್ದಾರೆ.
ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ಗೆ ವಿದೇಶಾಂಗ ಇಲಾಖೆ (ಶಶಿ ತರೂರ್), ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಹಾಗೂ ಕ್ರೀಡೆ (ದಿಗ್ವಿಜಯ್ ಸಿಂಗ್), ಕೃಷಿ, ಪಶು ಸಂಗೋಪನೆ ಮತ್ತು ಆಹಾರ ಸಂಸ್ಕರಣೆ (ಚರಣ್‌ಜಿತ್ ಸಿಂಗ್ ಚನ್ನಿ) ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಸಪ್ತಗಿರಿ ಶಂಕರ್ ಉಲಕ) ಇಲಾಖೆಗಳಿಗೆ ಸಂಬಂಧಿಸಿದ ಸಮಿತಿಗಳ ಅಧ್ಯಕ್ಷತೆಯನ್ನು ನೀಡಲಾಗಿದೆ.
ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಶಿವಸೇನಾಗೆ ಇಂಧನ (ಎಸ್.ಎ. ಚಂದು ಬಾರ್ನೆ), ಟಿಡಿಪಿಗೆ ವಸತಿ ಮತ್ತು ನಗರ (ಎಂ. ಶ್ರೀನಿವಾಸುಲು ರೆಡ್ಡಿ), ಎನ್‌ಸಿಪಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (ಸುನಿಲ್ ತಟ್ಕರೆ) ಸಮಿತಿ ಹೊಣೆ ನೀಡಲಾಗಿದೆ.
ವಿರೋಧ ಪಕ್ಷಗಳ ಪೈಕಿ, ಟಿಎಂಸಿಗೆ ವಾಣಿಜ್ಯ (ದೊಲಾ ಸೇನ್), ರಸಗೊಬ್ಬರ (ಕೀರ್ತಿ ಆಜಾದ್), ಸಮಾಜವಾದಿ ಪಕ್ಷಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ರಾಮ್ ಗೋಪಾಲ್ ಯಾದವ್), ಡಿಎಂಕೆಗೆ ಕೈಗಾರಿಕೆ (ತಿರುಚಿ ಶಿವ), ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ (ಕನಿಮೋಳಿ) ಸಮಿತಿಗಳ ಅಧ್ಯಕ್ಷತೆ ನೀಡಲಾಗಿದೆ.