ವಾಷಿಂಗ್ಟನ್: ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ BAPS ಸ್ವಾಮಿನಾರಾಯಣ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು ಅಮೆರಿಕ ಶಾಸಕಾಂಗ ನಾಯಕರು, ಸದಸ್ಯರು, ಹಿಂದೂ ಸಮಾಜದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ಘಟನೆಗೆ ಕಾರಣರಾದವರು ಯಾರು ಎಂಬುದು ಬಹಿರಂಗವಾಗಿಲ್ಲ.
ಆದರೆ, ದಾಳಿ ವೇಳೆ ಮೋದಿ, ಭಾರತ ವಿರೋಧಿ ಬರಹಗಳು ಕಂಡು ಬಂದಿವೆ ಎಂದು ಕೆಲ ವರದಿಗಳು ತಿಳಿಸಿವೆ. ಇನ್ನೊಂದೆಡೆ ಈ ಘಟನೆಯ ತನಿಖೆಯ ಹೊಣೆಯನ್ನು ಎಫ್‌ಬಿಐಗೆ ನೀಡಬೇಕು ಎಂದು ಅಮೆರಿಕದ ಭಾರತೀಯ ಸಮುದಾಯದ ವಕ್ತಾರರು ಹೇಳಿದ್ದಾರೆ.
ಅಮೆರಿಕಕ್ಕೆ ಅವಮಾನಕರವಾದ ಈ ಘಟನೆಗೆ ಕಾರಣರಾದವರನ್ನು ಕಾನೂನಿನ ಅಡಿ ಶಿಕ್ಷಿಸಬೇಕಿದೆ ಎಂದು ಹೇಳಿದ್ದಾರೆ.
ಹಿಂಸಾಚಾರದ ಕೃತ್ಯಗಳಿಗೆ ಅಮೆರಿಕದಲ್ಲಿ ಯಾವುದೇ ನೆಲೆಯಿಲ್ಲ. ಆರಾಧನಾ ಸಂಸ್ಕೃತಿಯು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸುವ ಈ ಕೆಲಸವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ ರಾವ್ ಖನ್ನಾ ಹೇಳಿದ್ದಾರೆ.
ಸ್ವಾಮಿನಾರಾಯಣ ದೇವಾಲಯದಲ್ಲಿ ನಡೆದ ಘಟನೆ ಅತ್ಯಂತ ಹೇಯವಾದದ್ದು ಎಂದು ಮತ್ತೊಬ್ಬಸಂಸದರಾದ ರಾಜಾ ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಹ ವಿದ್ವಂಸಕರ ಕೃತ್ಯಗಳ ಬಗ್ಗೆ ಉನ್ನತ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. BAPS ಸ್ವಾಮಿನಾರಾಯಣ ಸಮುದಾಯ ನ್ಯಾಯಕ್ಕೆ ಅರ್ಹವಾಗಿದೆ ಎಂದು ಸಂಸದ ಥಾಣೆದಾರ್ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೆಟ್ ಜನರಲ್, 'ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿರುವುದಾಗಿ' ಹೇಳಿದ್ದಾರೆ.
ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಮೆಲ್ವಿಲ್ಲೆಯಲ್ಲಿ ಸ್ವಾಮಿ ನಾರಾಯಣ ದೇವಾಯಲದ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ.