ಆಸ್ಕರ್ ಪ್ರಶಸ್ತಿ ವಿಜೇತೆ(Oscar winner) ನಟಿ ಡೇಮ್ ಮ್ಯಾಗಿ ಸ್ಮಿತ್ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಮಕ್ಕಳಾದ ಟೋಬಿ ಸ್ಟೀಫನ್ಸ್ ಮತ್ತು ಕ್ರಿಸ್ ಲಾರ್ಕಿನ್ ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ದೃಢಪಡಿಸಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ 27ರ ಶುಕ್ರವಾರ ಮುಂಜಾನೆ ತಮ್ಮ ತಾಯಿ ಡೇಮ್ ಮ್ಯಾಗಿ ಸ್ಮಿತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹ್ಯಾರಿ ಪಾಟರ್ ಚಲನಚಿತ್ರಗಳು ಮತ್ತು ಡೌನ್‌ಟನ್ ಅಬ್ಬೆಯಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ನಟಿ ಡೇಮ್ ಮ್ಯಾಗಿ ಸ್ಮಿತ್ ಅವರು 89ನೇ ವಯಸ್ಸಿನಲ್ಲಿ ನಿಧನರಾಗಿರುವುದಾಗಿ ಅವರ ಕುಟುಂಬ ಘೋಷಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ನಟಿ ಡೇಮ್ ಮ್ಯಾಗಿ ಸ್ಮಿತ್ ಇಬ್ಬರು ಪುತ್ರರು ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ.
50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಂತರ, ಸ್ಮಿತ್ ಬ್ರಿಟನ್‌ನ ಪ್ರಸಿದ್ಧ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು.ಹ್ಯಾರಿ ಪಾಟರ್ ಚಲನಚಿತ್ರಗಳಲ್ಲಿ ಪ್ರೊಫೆಸರ್ ಮಿನರ್ವಾ ಮೆಕ್ಗೊನಾಗಲ್ ಹಾಗೂ ದೂರದರ್ಶನದ ಡೌನ್‌ಟನ್ ಅಬ್ಬೆನಲ್ಲಿನ ಡೋವೇಜರ್ ಕೌಂಟೆಸ್ ಆಫ್ ಗ್ರ್ಯಾಂಥಾಮ್ ಪಾತ್ರಕ್ಕೆ ಜೀವ ತುಂಬಿದ್ದರು. ಈ ಪಾತ್ರಗಳಿಂದಲೇ ಅವರು ಇತ್ತೀಚೆಗಿನ ಪೀಳಿಗೆಗೆ ಹೆಚ್ಚು ಜನಪ್ರಿಯವಾಗಿದ್ದಾರೆ.
ಸ್ಮಿತ್ ತಮ್ಮ ವೃತ್ತಿಜೀವನದಲ್ಲಿ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆಲ್ಲುವುದರ ಜತೆಗೆ ಸ್ಮಿತ್ ಅವರು 5 BAFTA ಪ್ರಶಸ್ತಿಗಳು, 4 ಎಮ್ಮಿ ಪ್ರಶಸ್ತಿ, 3 ಗೋಲ್ಡನ್ ಗ್ಲೋಬ್ಸ್, 5 ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಮತ್ತು ಟೋನಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 1990ರಲ್ಲಿ ಅವರು ಡೇಮ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಆಗಿ ನೇಮಕಗೊಂಡರು.