ಕಾಸರಗೋಡು: ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಲಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಜ್ವರ, ತಲೆನೋವು, ಕಾಲುಗಳ ಸ್ನಾಯುಗಳಲ್ಲಿ ನೋವು, ಕಣ್ಣುಗಳು ಹಳದಿ-ಕೆಂಪು ಬಣ್ಣಕ್ಕೆ ತಿರುಗುವುದು, ಮೂತ್ರದ ಪ್ರಮಾಣ ಕಡಿಮೆಯಾಗುವುದು ಮತ್ತು ಗಾಢ ಬಣ್ಣ ಇಲಿಜ್ವರದ ಮುಖ್ಯ ಲಕ್ಷಣಗಳಾಗಿದೆ. ಜ್ವರದ ಜೊತೆಗೆ ಜಾಂಡೀಸ್‍ನ ಲಕ್ಷಣಗಳು ಕಂಡುಬಂದಲ್ಲಿ ಹಳದಿ ಜ್ವರವನ್ನು ಶಂಕಿಸಬಹುದು. ರೋಗವು ತೀವ್ರವಾಗಿದ್ದು, ಸಕಾಳದಲ್ಲಿ ಚಿಕಿತ್ಸೆ ಲಭಿಸದಿದ್ದಲ್ಲಿ ಸಾವು ಸಂಭವಿಸಬಹುದು.
ಇಲಿಗಳು, ಅಳಿಲು, ಬೆಕ್ಕು, ನಾಯಿ, ಮೊಲ, ದನಗಳು ಇತ್ಯಾದಿಗಳ ಮಲವಿಸರ್ಜನೆಯಿಂದ ಕಲುಷಿತಗೊಂಡ ನೀರಿನಿಂದ ದೂರವಿರಬೇಕು. ಇಂತಹ ಕಲುಷಿತ ನೀರಿನಿಂದ ಕೈ ಮತ್ತು ಮುಖ ತೊಳೆಯುವುದು, ಸ್ನಾನ ಮಾಡಬಾರದು. ಕಲುಷಿತ ಆಹಾರ ಮತ್ತು ನೀರಿನ ಸೇವನೆಯು ಇಲಿಜ್ವರಕ್ಕೆ ಕಾರಣವಾಗಬಲ್ಲುದು ಎಂದು ತಿಳಿಸಿದ್ದಾರೆ.