ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ಜಾಮೀನು ಮಂಜೂರು ಮಾಡಿದೆ.
ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಇದು ಸಣ್ಣಪುಟ್ಟ ಗಾಯಗಳ ಪ್ರಕರಣವಾಗಿದ್ದು, ಈ ವಿಷಯದಲ್ಲಿ ಜಾಮೀನು ವಿರೋಧಿಸಬಾರದು ಎಂದು ದೆಹಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಿಗೆ ಹೇಳಿದೆ.
ಪ್ರಕರಣ ಸಂಬಂಧ 51ಕ್ಕೂ ಹೆಚ್ಚು ಸಾಕ್ಷಿಗಳಿದ್ದು, ವಿಚಾರಣೆ ಮುಕ್ತಾಯಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಪೊಲೀಸರು ಈಗಾಗಲೇ ಆರೋಪಪಟ್ಟಿ ಸಲ್ಲಿಸಿರುವುದರಿಂದ ಆರೋಪಿಗೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
ಬಿಭವ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಪ್ರಕರಣದಲ್ಲಿ ಹೆಚ್ಚಿನ ಸಾಕ್ಷಿಗಳು ದೆಹಲಿ ಪೊಲೀಸ್ ಅಧಿಕಾರಿಗಳಾಗಿರುವುದರಿಂದ ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
ಈಚೆಗೆ ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಬಿಭವ್ ಕುಮಾರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮಾಲಿವಾಲ್ ಅವರ ವಿರುದ್ಧ ಮೇ 13ರಂದು ಹಲ್ಲೆ ನಡೆಸಿದ್ದ ಆರೋಪವನ್ನು ಬಿಭವ್ ಕುಮಾರ್ ಎದುರಿಸುತ್ತಿದ್ದಾರೆ. ಅವರನ್ನು ಪೊಲೀಸರು ಮೇ 18ರಂದು ಬಂಧಿಸಿದ್ದರು.