ಶಿಮ್ಲಾ: ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮಸೀದಿಯ ಭಾಗವನ್ನು ನೆಲಸಮ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಬುಧವಾರ ಘರ್ಷಣೆ ನಡೆಯಿತು.
ಉದ್ರಿಕ್ತ ಗುಂಪು ಬ್ಯಾರಿಕೇಡ್‌ಗಳನ್ನು ಕಿತ್ತೊಗೆದು, ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿತು.
ಕೆಲ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಓಗೊಟ್ಟು ಸಬರ್ಜಿ ಮಂಡಿ ಧಾಲಿ ಬಳಿ ನೆರೆದ ನೂರಾರು ಜನರು 'ಜೈ ಶ್ರೀರಾಮ್' ಮತ್ತು 'ಹಿಂದು ಏಕ್ತಾ ಜಿಂದಾಬಾದ್' ಎಂದು ಘೋಷಣೆ ಕೂಗಿದರು.
ನಿರ್ಬಂಧಗಳನ್ನು ಮೀರಿ ಧಾಲಿ ಸುರಂಗದ ಸಮೀಪ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದರು. ಪ್ರತಿಭಟನಕಾರರು ಸಂಜೌಲಿ ಪ್ರದೇಶವನ್ನು ಪ್ರವೇಶಿಸಿ ಮಸೀದಿ ಸಮೀಪ ಹಾಕಿದ್ದ ಬ್ಯಾರಿಕೇಡ್‌ಗಳನ್ನೂ ಕಿತ್ತೆಸೆಯುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದರು. ನಂತರ ಜಲಫಿರಂಗಿ ಮೂಲಕ ಗುಂಪನ್ನು ಚದುರಿಸಲು ಯತ್ನಿಸಿದರು.
ಹಿಂದೂ ಜಾಗರಣ್ ಮಂಚ್ ಕಾರ್ಯದರ್ಶಿ ಕಮಲ್ ಗೌತಮ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಮತ್ತೆ ಬ್ಯಾರಿಕೇಡ್‌ಗಳನ್ನು ಹಾಕಿದರು. ಆದರೂ ಸ್ಥಳದಿಂದ ಕದಲದ ಪ್ರತಿಭಟನಕಾರರು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ಘರ್ಷಣೆ ಮತ್ತು ಕಲ್ಲು ತೂರಾಟದ ಪರಿಣಾಮ ಕನಿಷ್ಠ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರು ಕೈಗೊಂಡ ಕ್ರಮದಿಂದಾಗಿ ಪ್ರತಿಭಟನಕಾರರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮಕ್ಕಳು ಶಾಲೆಗಳಲ್ಲಿ ಅತಂತ್ರ:
ಸಂಘರ್ಷ ಭುಗಿಲೆದ್ದ ಕಾರಣ ಸಂಜೌಲಿ, ಧಾಲಿ ಮತ್ತಿತರ ಪ್ರದೇಶಗಳ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಸಿಲುಕಿದರು. ಪ್ರತಿಭಟನೆ ಹಮ್ಮಿಕೊಂಡ ಬಗ್ಗೆ ಮಾಹಿತಿ ಇದ್ದರೂ ಶಾಲೆಗೆ ರಜೆ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.