ನವದೆಹಲಿ: 'ಜಾತಿ ಗಣತಿ ನಡೆಸುವುದಕ್ಕೆ ತನ್ನ ಆಕ್ಷೇಪ ಇಲ್ಲ' ಎಂಬುದಾಗಿ ಹೇಳಿರುವ ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಮಂಗಳವಾರ ಚಾಟಿ ಬೀಸಿದೆ.
ನವದೆಹಲಿ: 'ಜಾತಿ ಗಣತಿ ನಡೆಸುವುದಕ್ಕೆ ತನ್ನ ಆಕ್ಷೇಪ ಇಲ್ಲ' ಎಂಬುದಾಗಿ ಹೇಳಿರುವ ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಮಂಗಳವಾರ ಚಾಟಿ ಬೀಸಿದೆ.
'ಜಾತಿ ಗಣತಿ ನಡೆಸುವುದು ಪಕ್ಷದ ಗ್ಯಾರಂಟಿಗಳಲ್ಲೊಂದು. ಈ ಕುರಿತು ಆರ್‌ಎಸ್‌ಎಸ್ ತನ್ನ ಅಭಿಪ್ರಾಯ ಹೊರಹಾಕಿದ್ದರಿಂದ, ತನ್ನ ಗ್ಯಾರಂಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 'ಹೈಜಾಕ್' ಮಾಡಿ, ಜಾತಿ ಗಣತಿ ನಡೆಸಿದರೂ ಅಚ್ಚರಿ ಇಲ್ಲ' ಎಂದು ಕಾಂಗ್ರೆಸ್ ಕುಟುಕಿದೆ.
'ತಾನು ಜಾತಿ ಗಣತಿ ಪರವೋ ಅಥವಾ ವಿರುದ್ಧವೋ ಎಂಬ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ದೇಶಕ್ಕೆ ತನ್ನ ಸ್ಪಷ್ಟ ನಿಲುವು ತಿಳಿಸಬೇಕು' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
'ಪರಿಶಿಷ್ಟರು, ಬುಡಕಟ್ಟು ಜನರು ಹಾಗೂ ಒಬಿಸಿಗಳಿಗೆ ನೀಡುವ ಮೀಸಲಾತಿಗೆ ಸಂಬಂಧಿಸಿ ಶೇ 50ರ ಮಿತಿ ತೆಗೆದು ಹಾಕಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಆರ್‌ಎಸ್‌ಎಸ್ ಏಕೆ ನಿಗೂಢ ಮೌನ ವಹಿಸಿದೆ' ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
ನಿರ್ದಿಷ್ಟ ಸಮುದಾಯಗಳು ಅಥವಾ ಜಾತಿಗಳಿಗೆ ಸಂಬಂಧಿಸಿದ ದತ್ತಾಂಶ ಸಂಗ್ರಹಕ್ಕೆ ತನ್ನ ಆಕ್ಷೇಪ ಇಲ್ಲ. ಆದರೆ, ಈ ರೀತಿ ಸಂಗ್ರಹಿಸಿದ ಮಾಹಿತಿಯನ್ನು ಆಯಾ ಸಮುದಾಯ, ಜಾತಿಗಳ ಕಲ್ಯಾಣಕ್ಕೆ ಬಳಸಿಕೊಳ್ಳಬೇಕು ಹಾಗೂ ಚುನಾವಣೆ ಲಾಭಕ್ಕಾಗಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು ಎಂದು ಆರ್‌ಎಸ್‌ಎಸ್ ಸೋಮವಾರ ಹೇಳಿತ್ತು.