ಕಾಸರಗೋಡು: ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಧದಲ್ಲಿ ಶಾಲೆ ಬಿಡುವುದನ್ನು ತಡೆಯಲು ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಮತ್ತು ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಒ.ಆರ್. ಕೇಳು ತಿಳಿಸಿದರು. ಜಿಲ್ಲಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಲೆಗಳಿಂದ ಪರಿಶಿಷ್ಟ ಜಾತಿ ಪ್ರದೇಶದ ವಿದ್ಯಾರ್ಥಿಗಳು ಡ್ರಾಪ್‍ಔಟ್ ಆಗುವುದನ್ನು ಪರಿಶೀಲಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲಾಖೆ ಸೂಚನೆ ನೀಡಿದೆ. ಎಸ್‍ಸಿ-ಎಸ್‍ಟಿ ಪ್ರವರ್ತಕರು ಮನೆಗಳಿಗೆ ಭೇಟಿ ನೀಡಿ ಮಕ್ಕಳು ಓದಿನಿಂದ ಹೊರಗುಳಿಯುತ್ತಿರುವುದಕ್ಕೆ ಕಾರಣ ಪತ್ತೆ ಹಚ್ಚಲಿದ್ದಾರೆ. ಈ ರೀತಿ ಶಾಲೆಗೆ ತೆರಳದವರ ಸಂಖ್ಯೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಪ್ರಮೋಟರ್‍ಗಳು ಸೋಮವಾರ ಮತ್ತು ಶುಕ್ರವರ ಕಚೇರಿಯಲ್ಲಿದ್ದರೆ ಸಾಕು. ಉಳಿದ ದಿವಸಗಳಲ್ಲಿ ಕಾಲನಿ ಭೇಟಿ ನೀಡುವಂತೆ ಸೂಚಿಸಿದರು. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವಿಭಾಗಗಳ ಕಲ್ಯಾಣ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅಭಿವೃದ್ಧಿ, ಕಲ್ಯಾಣ ಚಟುವಟಿಕೆಗಳನ್ನು ಚುರುಕುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯನ್ನು ಸಚಿವರ ಸಮ್ಮುಖದಲ್ಲಿ ಪ್ರತಿ ತಿಂಗಳು ಆನ್‍ಲೈನ್ ಮೂಲಕ ನಡೆಸಿ, ಯೋಜನೆಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪೂರ್ಣಗೊಂಡಿರುವ ಕಟ್ಟಡಗಳನ್ನು ಸರ್ಕಾರದ 100 ದಿವಸಗಳ ಕ್ರಿಯಾ ಯೋಜನೆಯಲ್ಲಿ ಒಳಪಡಿಸಿ ಉದ್ಘಾಟನೆ ಮಾಡಲಾಗುವುದು. ಹೊಸ ಕಟ್ಟಡಗಳನ್ನು ನಿರ್ಮಿಸುವುದರ ಬದಲು, ಪ್ರಸಕ್ತ ಇರುವ ಕಟ್ಟಡಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು.
ಭೂ ರಹಿತ ವಸತಿ ರಹಿತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಸರ್ಕಾರದ ಯೋಜನೆಯನ್ವಯ ಭೂಮಿ ಮತ್ತು ಇದರ ಹಕ್ಕುಪತ್ರ ಒದಗಿಸಲಾಗುವುದು. ಉನ್ನತ ಶಿಕ್ಷಣ ಕ್ಷೇತ್ರ ಮತ್ತು ಪಿಎಸ್‍ಸಿ ತರಬೇತಿಗಾಗಿ ವಿಶೇಷ ಕೋಚಿಂಗ್ ಸೆಂಟರನ್ನು ಪ್ರವರ್ತಕರ ಮೂಲಕ ಆರಂಭಿಸಲು ಕ್ರಮಕೈಗೊಳ್ಳಲಾಗುವುದು.
ಅಂಬೇಡ್ಕರ್ ಭವನದಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ವಾಸಿಸುವ ಪ್ರದೇಶದ ಕಾಲನಿ ಎಂಬ ಹೆಸರನ್ನು ಬದಲಾಯಿಸಲು ಕಾನೂನು ಮತ್ತು ನಿಯಮಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಕೆ.ಇನ್ಬಾ ಶೇಖರ್ ಉಪಸ್ಥಿತರಿದ್ದರು.