ಭುಜ್ : ಭುಜ್ -ಅಹಮದಾಬಾದ್ ವಂದೇ ಮೆಟ್ರೊವನ್ನು 'ನಮೋ ಭಾರತ್ ರ‍್ಯಾಪಿಡ್ ರೈಲು' ಎಂದು ಮರುನಾಮಕರಣ ಮಾಡಲಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಸಂಜೆ 4:15ಕ್ಕೆ ಭುಜ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ 'ನಮೋ ಭಾರತ್ ರ‍್ಯಾಪಿಡ್ ರೈಲು' ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ರ‍್ಯಾಪಿಡ್ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್ ಅನ್ನು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಅಹಮದಾಬಾದ್‌ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. 359 ಕಿ.ಮೀ ದೂರವನ್ನು ಕೇವಲ 5:45 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ನಡುವೆ ಒಂಬತ್ತು ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ. ಸೆಪ್ಟೆಂಬರ್ 17ರಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದು, ಒಟ್ಟು ಪ್ರಯಾಣ ದರ ₹455.
'ಇತರ ಮೆಟ್ರೊ ರೈಲುಗಳು ಕಡಿಮೆ ಅಂತರದಲ್ಲಿ ಸಂಚರಿಸಲಿವೆ. ನಮೋ ಭಾರತ್ ರೈಲು ನಗರದ ಹೃದಯಭಾಗದಿಂದ ಬಾಹ್ಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ' ಎಂದು ರೈಲ್ವೆ ಸಚಿವಾಲಯ ಹೇಳಿದೆ.
'1,150 ಪ್ರಯಾಣಿಕರಿಗೆ ಆಸನಗಳನ್ನು ಹೊಂದಿರುವ 12 ಕೋಚ್‌ಗಳನ್ನು ಒಳಗೊಂಡಿರುವ ಈ ರ‍್ಯಾಪಿಡ್ ರೈಲು ಹಲವಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇತರ ಮೆಟ್ರೊಗಳಿಗಿಂತ ಉನ್ನತ ದರ್ಜೆಯದ್ದಾಗಿದೆ. ಅತ್ಯುತ್ತಮ ದರ್ಜೆಯ ಸೀಟುಗಳು, ಹವಾನಿಯಂತ್ರಿತ ಕ್ಯಾಬಿನ್, ಮಾಡ್ಯುಲರ್ ಇಂಟೀರಿಯರ್ಸ್ ಹೊಂದಿದೆ. ಅಪಘಾತ ತಡೆ ತಂತ್ರಜ್ಞಾನ ಕವಚ್, ಬೆಂಕಿ ಅವಘಡ ಪತ್ತೆ ತಂತ್ರಜ್ಞಾನ, ಎಮರ್ಜೆನ್ಸಿ ಲೈಟ್‌ಗಳು, ಏರೋಸಾಲ್ ಆಧಾರಿತ ಬೆಂಕಿ ನಂದಿಸುವ ವ್ಯವಸ್ಥೆಯಂತಹ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ' ಎಂದೂ ಸಚಿವಾಲಯ ಹೇಳಿದೆ.