ಜಮ್ಮು : 'ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯು ಕೊನೆಗಾಣುತ್ತಿದ್ದು, ಅತ್ಯಂತ ಸುಂದರವಾದ ಪ್ರದೇಶವನ್ನು ನಾಶಪಡಿಸಿದ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹೊಸ ನಾಯಕತ್ವವನ್ನು ಪರಿಚಯಿಸುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಜಮ್ಮು ಪ್ರಾಂತ್ಯದ ಡೋಡಾ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ನಾವು ಹಾಗೂ ನೀವು ಸೇರಿಕೊಂಡು, ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಸಂಪದ್ಭರಿತ ರಾಜ್ಯವನ್ನಾಗಿ ನಿರ್ಮಿಸೋಣ' ಎಂದು ಕರೆ ನೀಡಿದರು.
ಇದೇ ಸೆ. 18ರಂದು ರಾಜ್ಯ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮೊದಲ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡರು.
'ಸ್ವಾತಂತ್ರ್ಯಾ ನಂತರ, ಜಮ್ಮು ಮತ್ತು ಕಾಶ್ಮೀರವು ವಿದೇಶಿ ಶಕ್ತಿಗಳು ಹಾಗೂ ಕುಟುಂಬ ರಾಜಕಾರಣಕ್ಕೆ ಗುರಿಯಾಗಿದ್ದರಿಂದ ಸುಂದರ ಪ್ರದೇಶದ ಒಳಗೆ ನಿರ್ವಾತ ಸೃಷ್ಟಿಸಿತು. ಕುಟುಂಬ ರಾಜಕಾರಣ ನಡೆಸಿದವರು, ಮಕ್ಕಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ, ಹೊಸ ನಾಯಕತ್ವದ ಬೆಳವಣಿಗೆಗೆ ಅವಕಾಶ ನೀಡಲಿಲ್ಲ' ಎಂದು ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬದ ವಿರುದ್ಧ ಕಿಡಿಕಾರಿದರು.
'2014ರಲ್ಲಿ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸರ್ಕಾರವು ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದೆ' ಎಂದರು.