ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ, 'ಹಿಂದೂಗಳೇ ಹಿಂತಿರುಗಿ!' ಎಂಬ ಗೀಚುಬರಹ ಬರೆದು ದ್ವೇಷ ಹರಡುವ ಕೃತ್ಯ ಎಸಗಿದ್ದಾರೆ ಎಂದು ಬಿಎಪಿಎಸ್ (ಬೋಚಾಸನವಾರಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ) ಸಾರ್ವಜನಿಕ ವ್ಯವಹಾರಗಳ ವಿಭಾಗವು ತಿಳಿಸಿದೆ.
'ನ್ಯೂಯಾರ್ಕ್‌ನಲ್ಲಿರುವ ಬಿಎಪಿಎಸ್ ಮಂದಿರವನ್ನು ಅಪವಿತ್ರಗೊಳಿಸಿದ 10 ದಿನಗಳ ನಂತರ, ಸ್ಯಾಕ್ರಮೆಂಟೊದ ಮಂದಿರವನ್ನು ಕಳೆದ ರಾತ್ರಿ ಹಿಂದೂ ವಿರೋಧಿ ದ್ವೇಷದಿಂದ ಅಪವಿತ್ರಗೊಳಿಸಲಾಗಿದೆ. ದುಷ್ಕರ್ಮಿಗಳು ಬರೆದಿರುವ 'ಹಿಂದೂಗಳೇ ಹಿಂತಿರುಗಿ!' ಎಂಬ ದ್ವೇಷಪೂರಿತ ಗೀಚುಬರಹದ ವಿರುದ್ಧ ಶಾಂತಿಗಾಗಿ ಪ್ರಾರ್ಥನೆಯೊಂದಿಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ' ಎಂದು ಬಿಎಪಿಎಸ್ ಸಾರ್ವಜನಿಕ ವ್ಯವಹಾರಗಳ ವಿಭಾಗವು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಸೆಪ್ಟೆಂಬರ್ 17 ರಂದು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದರು. ದೇಶದಲ್ಲಿ ತಿಂಗಳೊಳಗೆ ನಡೆದಿರುವ ಎರಡನೇ ಘಟನೆ ಇದಾಗಿದೆ.
ಈ ಘಟನೆ ನಡೆದಿರುವ ಬೆನ್ನಲ್ಲೇ ಹಿಂದೂ ಸಮುದಾಯವು, ಪ್ರಾರ್ಥನಾ ಸಮಾರಂಭಕ್ಕಾಗಿ ಒಟ್ಟುಗೂಡಿತು. ಶಾಂತಿ ಮತ್ತು ಏಕತೆಗೆ ಕರೆ ನೀಡಿತು. ಅಲ್ಲದೆ, ಪವಿತ್ರ ಮಹಾಂತ ಸ್ವಾಮಿ ಮಹಾರಾಜ್ ಅವರು ಸಾರಿದ ಸಾಮರಸ್ಯ ಮತ್ತು ಆದರ್ಶವನ್ನು ಸ್ಮರಿಸಲಾಯಿತು.
'ಈ ಘಟನೆಯಿಂದ ನಮಗೆ ತೀವ್ರ ದುಃಖವಾಗಿದೆ. ದ್ವೇಷ ಹರಡುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಾವು ಎಲ್ಲರ ಒಳಿತಿಗಾಗಿ ಪ್ರಾರ್ಥಿಸುತ್ತೇವೆ. ಸ್ಯಾಕ್ರಮೆಂಟೊದಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರವು ಹಲವು ಚಟುವಟಿಕೆಗಳು ಮತ್ತು ಯೋಜನೆಗಳಲ್ಲಿ ತೊಡಗಿರುವ ಹಿಂದೂ ಸಮುದಾಯಕ್ಕೆ ನೆಲೆಯಾಗಿದೆ. ನಾವು ಈ ಸಮುದಾಯದ ಪ್ರಬಲ ಅವಿಭಾಜ್ಯ ಅಂಗವಾಗಿ ಉಳಿಯುತ್ತೇವೆ' ಎಂದು ಬಿಎಪಿಎಸ್ ಹೇಳಿಕೆಯಲ್ಲಿ ತಿಳಿಸಿದೆ.