ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಾಸರಗೋಡು ತಾಲೂಕಿನ ವತಿಯಿಂದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಮತ್ತು ರಿಕ್ಷಾ ಚಾಲನಾ ತರಬೇತಿ ಕಾರ್ಯಕ್ರಮ ಬದಿಯಡ್ಕದಲ್ಲಿ ಗುರುವಾರ ನಡೆಯಿತು.
ಬದಿಯಡ್ಕ ಅಬಕಾರಿ ಇಲಾಖೆ ಅಧಿಕಾರಿ ಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯ ಜನೋಪಯೋಗಿ ಕಾರ್ಯಚಟುವಟಿಕೆ ಶ್ಲಾಘನೀಯ. ಬದಿಯಡ್ಕದಲ್ಲಿಯೂ ಮಹಿಳೆಯರು ರಿಕ್ಷಾ ಚಲಾಯಿಸುವಂತಾಗಬೇಕು ಹಾಗೂ ಹೊಲಿಗೆ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸ್ವ ಉದ್ಯೋಗಕ್ಕೆ ಪ್ರೇರಣೆಯಾಗಲಿ ಎಂದರು.
ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು.
ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ, ಅಬಕಾರಿ ಅಧಿಕಾರಿ ಜನಾರ್ದನನ್ ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷ ತಾರನಾಥ ಶುಭಹಾರೈಸಿದರು. ಜನಜಾಗೃತಿ ವೇದಿಕೆಯ ಸದಸ್ಯ ಹರೀಶ್ ಗೋಸಾಡ, ಸೌಪರ್ಣಿಕಾ ನವಜೀವನ ಸಮಿತಿಯ ಜಯರಾಮ ಪಡುಮಲೆ ತರಬೇತಿ ಶಿಕ್ಷಕರಾಗಿರುವ ಅನಿತಾ ಮತ್ತು ಪ್ರವೀಣ, ಸುಪ್ರಿಯಾ ಮುಂತಾದವರು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಸ್ವಾಗತಿಸಿ, ಸೇವಾ ಪ್ರತಿನಿಧಿ ಕವಿತಾ ವಂದಿಸಿದರು. ರಿಕ್ಷಾ ಚಾಲನೆ ತರಬೇತಿಗೆ ಐದು ಮಂದಿ ಮತ್ತು ಹೊಲಿಗೆ ತರಬೇತಿ ಪಡೆಯುವ 30 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.