ನವದೆಹಲಿ: ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಪ್ರಾದೇಶಿಕ) ನಡುವೆ ಎಂದಿಗೂ ಸ್ಪರ್ಧೆ ಇರಬಾರದು. ಏಕೆಂದರೆ ಅಧಿಕೃತ ಭಾಷೆ ಹಿಂದಿಯು ಇತರೆ ಭಾರತೀಯ ಭಾಷೆಗಳ ಗೆಳೆಯನಾಗಿದ್ದು, ಈ ಭಾಷೆಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಹಿಂದಿ ದಿವಸದ ಅಂಗವಾಗಿ ನಡೆದ ನಾಲ್ಕನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದ ಅವರು, ಇತರೆ ಭಾರತೀಯ ಭಾಷೆಗಳನ್ನು ಬಲಪಡಿಸದ ಹೊರತು ಅಧಿಕೃತ ಭಾಷೆ ಹಿಂದಿಯ ಪ್ರಗತಿ ಸಾಧ್ಯವಿಲ್ಲ ಮತ್ತು ಅಧಿಕೃತ ಭಾಷೆಯು ಆ ಭಾಷೆಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. 'ಹಿಂದಿ ಹಾಗೂ ಎಲ್ಲ ಸ್ಥಳೀಯ ಭಾಷೆಗಳ ನಡುವಿನ ಸಂಬಂಧ ಬಲಗೊಳ್ಳಬೇಕಿದೆ' ಎಂದರು.
ಹಿಂದಿಯನ್ನು ಸಂವಹನ ಭಾಷೆ, ಜನಸಾಮಾನ್ಯರ ಭಾಷೆ, ತಾಂತ್ರಿಕ ಭಾಷೆ ಮತ್ತು ಈಗ ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಜ್ಞೆ ಕೈಗೊಳ್ಳಬೇಕಾದ ಸಂದರ್ಭವೇ ಹಿಂದಿ ದಿವಸವಾಗಿದೆ. 'ಹಿಂದಿ ಅಧಿಕೃತ ಭಾಷೆಯಾಗಿ 75 ವರ್ಷಗಳನ್ನು ಪೂರೈಸಿದ್ದಕ್ಕಾಗಿ ನಾವು ವಜ್ರ ಮಹೋತ್ಸವ ಆಚರಿಸುತ್ತಿದ್ದೇವೆ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸುವ ಮೂಲಕ ಹಾಗೂ ಹಿಂದಿಯೊಂದಿಗೆ ದೇಶದ ಎಲ್ಲಾ ಸ್ಥಳೀಯ ಭಾಷೆಗಳನ್ನು ಸಂಪರ್ಕಗೊಳಿಸುವ ಮೂಲಕ ನಮ್ಮ ಸಂಸ್ಕೃತಿ, ಭಾಷೆಗಳು, ಸಾಹಿತ್ಯ, ಕಲೆ ಮತ್ತು ವ್ಯಾಕರಣವನ್ನು ಸಂರಕ್ಷಿಸುವ ಹಾಗೂ ಇನ್ನಷ್ಟು ಬಲಪಡಿಸುವತ್ತ ಸಾಗಿದ್ದೇವೆ' ಎಂದರು.
ತಮ್ಮ ಎರಡೂ ಸಚಿವಾಲಯಗಳಲ್ಲಿ ಕಡತಗಳ ಮೂಲಕ ನಡೆಯುವ ಸಂವಹನವು ಹಿಂದಿಯಲ್ಲೇ ನಡೆಯುತ್ತವೆ. 'ಈ ಹಂತ ತಲುಪಲು ಮೂರು ವರ್ಷ ಬೇಕಾಯಿತು' ಎಂದು ಅವರು ತಿಳಿಸಿದರು.
ಹಿಂದಿ ಚಳವಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಕ್ರವರ್ತಿ ರಾಜಗೋಪಾಲಾಚಾರಿ, ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲಾ ಲಜಪತ್ ರಾಯ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಆಚಾರ್ಯ ಜೆ.ಬಿ ಕೃಪಲಾನಿ ಅವರೆಲ್ಲ ಹಿಂದಿಯೇತರ ಪ್ರದೇಶಗಳಿಂದ ಬಂದವರು ಎಂಬುದು ತಿಳಿಯುತ್ತದೆ. ಹಿಂದೆ ಎನ್. ಗೋಪಾಲ ಸ್ವಾಮಿ ಐಯಂಗಾರ್ ಮತ್ತು ಕೆ.ಎಂ ಮುನ್ಶಿ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯು ಹಿಂದಿಗೆ ಅಧಿಕೃತ ಭಾಷೆಯ ಮಾನ್ಯತೆ ನೀಡುವಂತೆ ಸಂವಿಧಾನ ಸಭೆಗೆ ವರದಿ ಸಲ್ಲಿಸಿತ್ತು. ಅಲ್ಲದೇ, ಹಿಂದಿ ಹಾಗೂ ಎಲ್ಲ ಇತರೆ ಭಾಷೆಗಳನ್ನು ಬಲಪಡಿಸಲು ವರದಿಯಲ್ಲಿ ಮನವಿ ಮಾಡಲಾಗಿತ್ತು ಎಂದ ಅವರು, 'ಈ ಇಬ್ಬರೂ ನಾಯಕರು ಹಿಂದಿ ಮಾತನಾಡದ ಪ್ರದೇಶಗಳಿಂದ ಬಂದವರು' ಎಂದರು.
ಪ್ರಧಾನಿ ಮೋದಿ ಅವರು ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಲು ಅವಕಾಶ ಮಾಡಿಕೊಡುವ ಮೂಲಕ ಹಿಂದಿ ಹಾಗೂ ಎಲ್ಲಾ ಭಾರತೀಯ ಭಾಷೆಗಳಿಗೆ ಹೊಸ ಜೀವ ನೀಡಿದ್ದಾರೆ ಎಂದ ಅವರು, 'ಹಿಂದಿಯನ್ನು ಸರ್ಕಾರಿ ಕೆಲಸಗಳಲ್ಲಿ ಪ್ರಮುಖ ಭಾಷೆಯನ್ನಾಗಿ ಮಾಡಲು ನಾವು ಸಾಂವಿಧಾನಿಕ ಅಧಿಕೃತ ಭಾಷಾ ಸಮಿತಿಗೆ ನಾಲ್ಕು ವರದಿಗಳನ್ನು ಸಲ್ಲಿಸಿದ್ದೇವೆ. ಆ ನಿಟ್ಟಿನಲ್ಲಿ ಕೆಲಸವೂ ಸಾಗಿದೆ' ಎಂದರು.
ಅಧಿಕೃತ ಭಾಷಾ ಇಲಾಖೆಯು ಹಿಂದಿಯಿಂದ ಎಂಟನೆ ಶೆಡ್ಯೂಲ್‌ನಲ್ಲಿನಲ್ಲಿರುವ ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡುವುದಕ್ಕಾಗಿ ಪೋರ್ಟಲ್‌ವೊಂದನ್ನು ತರುತ್ತಿದೆ. ಈ ಪೋರ್ಟಲ್ ಮೂಲಕ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಕಡಿಮೆ ಸಮಯದಲ್ಲಿ ಯಾವುದೇ ಅಕ್ಷರ ಅಥವಾ ಮಾತನ್ನು ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡಬಹುದು ಎಂದು ತಿಳಿಸಿದರು.