2014 ರಲ್ಲಿ ನಿಷೇಧಿಸಲ್ಪಟ್ಟಿದ್ದರೂ ಸಹ ಚೀನಾದ ಬೆಳ್ಳುಳ್ಳಿ ಭಾರತದಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಇದು ಗುಜರಾತ್‌ನಲ್ಲಿ ವ್ಯಾಪಾರಿಗಳ ಪ್ರತಿಭಟನೆಗೆ ಕಾರಣವಾಗಿದೆ. ಈ ನಡುವೆ ನಾವು ಸೇವಿಸುತ್ತಿರೋ ಬೆಳ್ಳುಳ್ಳಿ ಚೀನಾದ್ದೋ ಅಥವಾ ಭಾರತದ್ದೋ ಎಂದು ತಿಳಿದುಕೊಳ್ಳಲು ಕೆಲ ಲಕ್ಷಣಗಳನ್ನು ತಜ್ಞರು ತಿಳಿಸಿದ್ದಾರೆ.
ತಜ್ಞರ ಪ್ರಕಾರ ಚೀನಾದ ಬೆಳ್ಳುಳ್ಳಿಗಳು ಭಾರತೀಯ ಬೆಳ್ಳುಳ್ಳಿಗಳಿಗಿಂತ ಅದರ ಗಾತ್ರ, ವಾಸನೆಯಿಂದ ಭಿನ್ನವಾಗಿದೆ. ಚೀನೀ ಬೆಳ್ಳುಳ್ಳಿ ತಿಳಿ ಬಿಳಿ ಮತ್ತು ಗುಲಾಬಿ ಬಣ್ಣ ಹೊಂದಿರುತ್ತದೆ. ಗಾತ್ರದಲ್ಲಿ ಸಾಮಾನ್ಯ ಬೆಳ್ಳುಳ್ಳಿಗಿಂತ ಚಿಕ್ಕದಾಗಿರುತ್ತದೆ. ಭಾರತೀಯ ಬೆಳ್ಳುಳ್ಳಿ ಬಲವಾದ ಮತ್ತು ಕಟುವಾದ ವಾಸನೆಯನ್ನು ಹೊಂದಿದ್ದರೆ, ಚೀನಾದ ಬೆಳ್ಳುಳ್ಳಿ ಸೌಮ್ಯವಾದ ಪರಿಮಳವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಇನ್ನು ಭಾರತದಲ್ಲಿ ಬೆಳ್ಳುಳ್ಳಿಯನ್ನು ಬೆಳೆಯಲು ಕನಿಷ್ಠ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಬಳಕೆಗೂ ಸುರಕ್ಷಿತವಾಗಿದೆ. ಆದರೆ ಚೀನಾದ ಬೆಳ್ಳುಳ್ಳಿಗೆ ರಾಸಾಯನಿಕಗಳು ಹಾಗೂ ಕೀಟನಾಶಕಗಳನ್ನು ಭಾರೀ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ಆದ್ದರಿಂದ ಚೈನೀಸ್ ಬೆಳ್ಳುಳ್ಳಿ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ.
ಇತ್ತೀಚೆಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗೊಂಡಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ (APMC) ಯಲ್ಲಿ ಚೀನಾದ ಬೆಳ್ಳುಳ್ಳಿಯ ಚೀಲಗಳು ಪತ್ತೆಯಾಗಿತ್ತು. ಇದಾದ ಬಳಿಕ ವ್ಯಾಪಾರಿಗಳು ದಿನವಿಡೀ ಪ್ರತಿಭಟನೆ ನಡೆಸಿದ್ದಾರೆ. ನಿಷೇಧದ ಹೊರತಾಗಿಯೂ ಚೀನಾದ ಬೆಳ್ಳುಳ್ಳಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿರುವುದನ್ನು ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಗೊಂಡಲ್ ಎಪಿಎಂಸಿಯ ವರ್ತಕರ ಸಂಘದ ಅಧ್ಯಕ್ಷ ಯೋಗೇಶ್ ಕಾಯದ ತಿಳಿಸಿದ್ದಾರೆ.
ಗಮನಾರ್ಹ ವಿಚಾರವೆಂದರೆ ಚೀನಾ ಬೆಳ್ಳುಳ್ಳಿಯ ವಿಶ್ವದ ಅತಿದೊಡ್ಡ ಉತ್ಪಾದಕವಾಗಿದೆ. ಇದು ಸ್ಥಳೀಯ ಬೆಳೆಗಿಂತ ಅಗ್ಗದ್ದಾಗಿದೆ. ಈ ಹಿನ್ನೆಲೆ ಭಾರತಕ್ಕೆ ಬರುತ್ತಿರುವ ಚೀನಾದ ಬೆಳ್ಳುಳ್ಳಿ ಕಳ್ಳಸಾಗಣೆದಾರರು ಹಾಗೂ ಏಜೆಂಟರಿಗೆ ಲಾಭ ತಂದುಕೊಟ್ಟರೂ ಇದು ಇಲ್ಲಿ ಬೆಳ್ಳುಳ್ಳಿ ಬೆಳೆದ ರೈತರಿಗೆ ನಷ್ಟವಾಗುತ್ತಿದೆ.