ಬದಿಯಡ್ಕ: ಸಹಕಾರ ಭಾರತಿಯ ಕಾಸರಗೋಡು ತಾಲೂಕು ಸಮಿತಿಯ ನೇತೃತ್ವದಲ್ಲಿ ಸಹಕಾರಿ ಬ್ಯಾಂಕ್ ಗಳ ನಿರ್ದೇಶಕರಿಗಾಗಿ ಒಂದು ದಿನದ ಅಭ್ಯಾಸ ವರ್ಗವನ್ನು ನೀರ್ಚಾಲು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಪೆರಡಾಲ ಸೇವಾಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಯದೇವ ಖಂಡಿಗೆ ಉದ್ಘಾಟಿಸಿದರು. ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು, ರಾಜ್ಯಕಾರ್ಯದರ್ಶಿ ಗಣೇಶ್ ಪಾರೆಕಟ್ಟೆ, ಕಾಸರಗೋಡು ಜಿಲ್ಲಾ ಸಂಘಟನಾ ಪ್ರಮುಖ್ ಅಶೋಕ್ ಬಾಡೂರು ಮಾತನಾಡಿದರು. ತಾಲೂಕು ಕಾರ್ಯದರ್ಶಿ ಗಣಪತಿಪ್ರಸಾದ ಕುಳಮರ್ವ ಸ್ವಾಗತಿಸಿ, ಪೆರಡಾಲ ಸೇವಾಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಅವಿನಾಶ್ ವಂದಿಸಿದರು. ನಿವೃತ್ತ ಸಹಕಾರಿ ಸ್ಪೆಷಲ್ ಗ್ರೇಡ್ ಇನ್ಸ್‍ಪೆಕ್ಟರ್ ಶಿವಪ್ರಸಾದ್ ಕಣ್ಣೂರು ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ಕರುಣಾಕರನ್ ನಂಬ್ಯಾರ್ ಸಮಾರೋಪ ಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ಅರವಿಂದಾಕ್ಷನ್ ಕಣ್ಣೂರು ಶುಭಾಶಂಸನೆಗೈದರು. ಸಹಕಾರಿ ಸಂಘಗಳ 60ಕ್ಕೂ ಹೆಚ್ಚು ಮಂದಿ ನಿರ್ದೇಶಕರು ಭಾಗವಹಿಸಿದ್ದರು.