ಮಂಜೇಶ್ವರ: ಇತರ ಭಾಷೆಗಳಲ್ಲಿರುವ ಸಾಹಿತ್ಯ ಕೃತಿಗಳು ಭಾಷಾಂತರಗೊಂಡು ಬರುವುದರಿಂದ ಯಾವುದೇ ಭಾಷೆಯ ಸಾಹಿತ್ಯದ ಬೆಳವಣಿಗೆಗೆ ಸಹಾಯಕವಾಗುವುದಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಆಯಿಷಾ ಪೆರ್ಲ ಹೇಳಿದರು.
ಅವರು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಸಾಹಿತಿ, ಅನುವಾದಕಿ ಡಾ. ಪಾರ್ವತಿ ಐತಾಳ್ ಅವರು ಮಲೆಯಾಳಕ್ಕೆ ಅನುವಾದಿಸಿದ
'ಭ್ರಾಂತಾಲಯಂ' ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಾವು ನಮ್ಮ ಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯಕ್ಕಷ್ಟೇ ನಮ್ಮ ಓದು ಸೀಮಿತಗೊಳಿಸಿದರೆ ನಮಗೆ ವಿಶ್ವ ಸಾಹಿತ್ಯದ ಪರಿಚಯವಾಗದು. ಕನ್ನಡದಿಂದ ಮಲಯಾಳಕ್ಕೆ ಭಾಷಾಂತರಿಸುವ ಮೂಲಕ ಡಾ. ಪಾರ್ವತೀ ಐತಾಳ್ ಅವರು ಅವಳಿ ಭಾಷೆಗಳ ನಡುವಿನ ಮಹತ್ವದ ಸೇತುವಾಗಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಮಹಮ್ಮದಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, "ಮಲೆಯಾಳದಿಂದ ಕನ್ನಡಕ್ಕೆ ಹಲವು ಕೃತಿಗಳು ಭಾಷಾಂಣತರಗೊಂಡಿದ್ದರೂ ಕನ್ನಡದಿಂದ ಮಲೆಯಾಳಕ್ಕೆ ತರ್ಜುಮೆಯಾದ ಕೃತಿಗಳು ಕಡಿಮೆ. ಈ ದಿಶೆಯಲ್ಲಿ ಡಾ. ಪಾರ್ವತೀ ಐತಾಳ್ ಎರಡೂ ಭಾಷೆಗಳನ್ನು ಅರಗಿಸಿಕೊಂಡು ಕನ್ನಡದ ಮಹತ್ವದ ಕೃತಿಗಳನ್ನು ಮಲೆಯಾಳಕ್ಕೆ ಅನುವಾದಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಲೇಖಕಿ ಡಾ. ಪಾರ್ವತಿ ಜಿ ಐತಾಳ್ ಕೇರಳ ಹಾಗೂ ಕರ್ನಾಟಕದ ರಂಗ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಪುಸ್ತಕದ ಪ್ರಕಾಶಕರಾದ ಅತೀಖ್ ಬೇವಿಂಜೆ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಜಾತಾ, ಮಂಜೇಶ್ವರ ಕಾಲೇಜಿನ ಹಿರಿಯ ಮೇಲ್ವಿಚಾರಕ ದಿನೇಶ್ ಕುಮಾರ್ , ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮತ್ತು ಕಾಲೇಜಿನ 'ಗಿಳಿವಿಂಡು' ಸಾಹಿತ್ಯ ಸಂಘದ ಅಧ್ಯಕ್ಷೆ ದೀಕ್ಷಿತಾ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಅಧ್ಯಾಪಕರಾದ ಡಾ.ಸುಜಿತ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜಯಂತಿ ವಂದಿಸಿದರು.