ಪಟ್ನಾ : ರಾಜ್ಯದ ಸೀತಾಮರ್ಹಿ ನಗರಕ್ಕೆ ಉತ್ತರ ಪ್ರದೇಶದ ಅಯೋಧ್ಯೆಯಿಂದ 'ವಂದೇ ಭಾರತ್ ರೈಲು' ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಪತ್ರ ಬರೆದಿದ್ದಾರೆ.
ಸೀತಾಮಾತೆಯ ತವರು ಎನ್ನಲಾಗುವ ಸೀತಾಮರ್ಹಿ ಜಿಲ್ಲೆಯಲ್ಲಿ 'ಪುನೌರಾ ಧಾಮ ಜಾನಕಿ ಮಂದಿರ'ವನ್ನು ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿಗೆ ಪತ್ರ ಬರೆದಿರುವ ನಿತೀಶ್, 'ಅಯೋಧ್ಯೆ ಮತ್ತು ಸೀತಾಮರ್ಹಿ ನಡುವೆ ಉತ್ತಮ ರೈಲು ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಯಾತ್ರಿಕರಿಗೆ ಎರಡೂ ದೇವಾಲಯಗಳಿಗೆ (ರಾಮಮಂದಿರ ಮತ್ತು ಪುನೌರಾ ಧಾಮ ಜಾನಕಿ ಮಂದಿರಕ್ಕೆ) ಭೇಟಿ ನೀಡಲು ಸಾಧ್ಯವಾಗಲಿದೆ. ಕೇಂದ್ರ ಸರ್ಕಾರವು ಬಿಹಾರದ ವಿವಿಧ ನಗರಗಳಿಂದ ದೇಶದ ಇತರ ಸ್ಥಳಗಳಿಗೆ 'ವಂದೇ ಭಾರತ್ ರೈಲು'ಗಳನ್ನು ಪರಿಚಯಿಸಿದೆ. ಅದಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಯೋಧ್ಯೆ ಮತ್ತು ಸೀತಾಮರ್ಹಿ ನಡುವೆ ಮತ್ತೊಂದು 'ವಂದೇ ಭಾರತ್ ರೈಲು' ಪರಿಚಯಿಸುವಂತೆ ಮನವಿ ಮಾಡುತ್ತೇನೆ. ಆ ಸಂಬಂಧ ರೈಲ್ವೆ ಇಲಾಖೆಗೆ ಸೂಚನೆ ನೀಡಬೇಕೆಂದು ಕೋರುತ್ತೇನೆ' ಎಂದು ಉಲ್ಲೇಖಿಸಿದ್ದಾರೆ.
'ಕೇಂದ್ರ ಸರ್ಕಾರವು ಅಯೋಧ್ಯೆಯಿಂದ ಸೀತಾಮರ್ಹಿಯನ್ನು ಸಂಪರ್ಕಿಸುವ 'ರಾಮ-ಜಾನಕಿ ಮಾರ್ಗ' ರಸ್ತೆ ಅಭಿವೃದ್ಧಿ ಕಾರ್ಯವನ್ನು ಈಗಾಗಲೇ ಆರಂಭಿಸಿರುವುದು ಅತ್ಯಂತ ಸಾರ್ಥಕತೆಯ ವಿಚಾರ' ಎಂದು ಅಭಿಪ್ರಾಯಪಟ್ಟಿರುವ ಅವರು, 'ಶೀಘ್ರದಲ್ಲೇ ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಇದರಿಂದ, ಯಾತ್ರಿಕರು ಆದಷ್ಟು ಬೇಗನೆ ಉತ್ತಮ ರಸ್ತೆ ಸೌಕರ್ಯ ಪಡೆಯಲು ಸಾಧ್ಯವಾಗಲಿದೆ' ಎಂದೂ ಪ್ರತಿಪಾದಿಸಿದ್ದಾರೆ.
ಪುನೌರಾ ಧಾಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ನಿತೀಶ್ ಅವರು 'ಪುನೌರಾ ಧಾಮ ಜಾನಕಿ ಮಂದಿರ'ದ ಸಮಗ್ರ ಅಭಿವೃದ್ಧಿಗೆ 2023ರ ಡಿಸೆಂಬರ್ 13ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಯೋಜನೆಗಾಗಿ ₹ 72.47 ಕೋಟಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ.
ಅಭಿವೃದ್ಧಿ ಯೋಜನೆಯ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ.