ನವದೆಹಲಿ: ಚೀನಾ ವಿಚಾರವಾಗಿ ಜಗತ್ತು ಹೊಂದಿರುವ ಸಾಮಾನ್ಯವಾದ ಸಮಸ್ಯೆಗಿಂತಲೂ ಮೇಲ್ಮಟ್ಟದ ಹಾಗೂ ವಿಶೇಷವಾದ ಸಮಸ್ಯೆಯನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ನವದೆಹಲಿ: ಚೀನಾ ವಿಚಾರವಾಗಿ ಜಗತ್ತು ಹೊಂದಿರುವ ಸಾಮಾನ್ಯವಾದ ಸಮಸ್ಯೆಗಿಂತಲೂ ಮೇಲ್ಮಟ್ಟದ ಹಾಗೂ ವಿಶೇಷವಾದ ಸಮಸ್ಯೆಯನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಅಲ್ಲದೆ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವುದು ಹಾಗೂ ಆ ದೇಶದ ಜೊತೆಗಿನ ಸಂಬಂಧದ ಬಗೆಯ ಕಾರಣಕ್ಕಾಗಿ ಆ ದೇಶದಿಂದ ಆಗುವ ಹೂಡಿಕೆಗಳನ್ನು ಪರಿಶೀಲಿಸಬೇಕಾದ ಅಗತ್ಯ ಉಂಟಾಗಿದೆ ಎಂದು ಹೇಳಿದ್ದಾರೆ.
'ಚೀನಾ ದೇಶವು ಹಲವು ಬಗೆಗಳಲ್ಲಿ ಬಹಳ ವಿಶಿಷ್ಟವಾದ ಸಮಸ್ಯೆ. ಏಕೆಂದರೆ ಅಲ್ಲಿನ ಪ್ರಭುತ್ವದ ವಿಧಾನವು ಬಹಳ ವಿಶಿಷ್ಟವಾಗಿದೆ. ಅಲ್ಲಿನ ಅರ್ಥ ವ್ಯವಸ್ಥೆ ವಿಶಿಷ್ಟವಾಗಿದೆ. ಆ ವೈಶಿಷ್ಟ್ಯವನ್ನು ಗ್ರಹಿಸಿ, ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸದಿದ್ದರೆ, ತಳೆಯುವ ನಿಲುವುಗಳು, ಕೈಗೊಳ್ಳುವ ನಿರ್ಧಾರಗಳು ಹಾಗೂ ಅನುಸರಿಸುವ ನೀತಿಗಳು ಸಮಸ್ಯೆಗಳನ್ನು ಸೃಷ್ಟಿಸಬಹುದು' ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
'ಚೀನಾ ವಿಚಾರವಾಗಿ ಸಾಮಾನ್ಯವಾದ ಸಮಸ್ಯೆಯೊಂದು ಇದೆ. ಚೀನಾ ಬಗ್ಗೆ ಚರ್ಚಿಸುತ್ತಿರುವ ದೇಶ ನಮ್ಮದೊಂದೇ ಅಲ್ಲ. ಯುರೋಪಿಗೆ ತೆರಳಿ, ಅಲ್ಲಿನ ಪ್ರಮುಖ ಆರ್ಥಿಕ ಹಾಗೂ ರಾಷ್ಟ್ರೀಯ ಭದ್ರತಾ ಚರ್ಚೆ ಯಾವುದರ ಬಗ್ಗೆ ಇದೆ ಎಂಬುದನ್ನು ಕೇಳಿ. ಅದು ಚೀನಾ ಕುರಿತಾಗಿದೆ. ಅಮೆರಿಕವನ್ನು ನೋಡಿ. ಅದರ ಮನಸ್ಸನ್ನೂ ಚೀನಾ ಕಾಡುತ್ತಿದೆ' ಎಂದು ಜೈಶಂಕರ್ ವಿವರಿಸಿದ್ದಾರೆ.
ಚೀನಾ ಜೊತೆ ಗಡಿಯನ್ನು ಹಂಚಿಕೊಂಡಿರದ ದೇಶಗಳು ಕೂಡ, ಅಲ್ಲಿಂದ ಬರುವ ಹೂಡಿಕೆಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. 'ಯುರೋಪು ಅಥವಾ ಅಮೆರಿಕವು ಚೀನಾ ದೇಶದ ಜೊತೆ ಗಡಿ ಹಂಚಿಕೊಂಡಿಲ್ಲ. ಹೀಗಿದ್ದರೂ, ಅವು ಅಲ್ಲಿಂದ ಬರುವ ಹೂಡಿಕೆಗಳನ್ನು ಪರಿಶೀಲಿಸುತ್ತಿವೆ' ಎಂದಿದ್ದಾರೆ.