ಕಾಸರಗೋಡು: ಏನೇ ಕಸರತ್ತು ನಡೆಸಿದರೂ, ಬಿಳಿಯಾನೆಯಂತಾಗಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವನ್ನು ನಷ್ಟದ ಹಾದಿಯಿಂದ ಮೇಲಕ್ಕೆತ್ತಲು ನಿಗಮಕ್ಕೆ ಸಾಧ್ಯವಾಗದಿರುವುದು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ನಷ್ಟದಲ್ಲಿರುವ ಕೆಎಸ್ಸಾರ್ಟಿಸಿ ಸಾರಿಗೆ ಹೊರತಾದ ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ, ಇದರಿಂದ ನಿರೀಕ್ಷಿತ ಯಶಸ್ಸು ಸಾಧಿಸಲಾಗಿಲ್ಲ.
ಸಂಚಾರ ಸ್ಥಗಿತಗೊಳಿಸಿ ಬಳಕೆಯಾಗದೆ ನಿಂತಿದ್ದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ನಿಗಮ ಆರಂಭಿಸಿದ ಮಿಲ್ಮಾ ಹಾಲಿನ ಉತ್ಪನ್ನಗಳ ಬೂತ್ ಇಂದು ಉಪಯೋಗಶೂನ್ಯವಾಗಿ ನಿಂತಿದೆ. ಕಾಸರಗೋಡಿನ ಕೆಎಸ್‍ಆರ್‍ಟಿಸಿ ಡಿಪೆÇೀ ವಠಾರದಲ್ಲಿ ಮಿಲ್ಮಾ ಹಾಲಿನ ಉತ್ಪನ್ನಗಳ ಮಾರಾಟವನ್ನು ಈ ಬಸ್ಸಿನಲ್ಲಿ ಆರಂಭಿಸಲಾಗಿತ್ತು. ಕೆಎಸ್ಸಾರ್ಟಿಸಿಯಲ್ಲಿ ಸಾರಿಗೆಯೇತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮಿಲ್ಮಾ ಹಾಲಿನ ಉತ್ಪನ್ನ ಮಾರಾಟ ವ್ಯವಸ್ಥೆ ಆರಂಭಿಸಿತ್ತು. ಇತರ ಜಿಲ್ಲೆಗಳಲ್ಲಿ ಕೆಎಸ್ಸಾರ್ಟಿಸಿ ಆರಂಭಿಸಿರುವ ಈ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದ್ದರೆ, ಕಾಸರಗೋಡಿನಲ್ಲಿ ಮಾತ್ರ ಕಳೆದ ಐದಾರು ತಿಂಗಳಿಂದ ಕೆಎಸ್ಸಾರ್ಟಿಸಿಯ ಮಿಲ್ಮಾ ಆಹಾರ ಟ್ರಕ್ ಸೇವೆ ಸ್ಥಗಿತಗೊಳಿಸಿದೆ.
ಕಾಸರಗೋಡು ಕೆಪಿಆರ್ ರಾವ್ ರಸ್ತೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ಮಿಲ್ಮಾ ಟ್ರಕ್ ಕಳೆದ ಒಂದುವರ ವರ್ಷ ಕಾಲ ಕಾರ್ಯನಿರ್ವಹಿಸಿದೆ. ಕೆಎಸ್‍ಆರ್‍ಟಿಸಿ ನೌಕರರ ಸಹಕಾರ ಸಂಘ ಮಿಲ್ಮಾ ಟ್ರಕ್ ಸೇವೆಯನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದರೆ, ಈ ಬಾರಿ ಗುತ್ತಿಗೆ ಕಾಲಾವಧಿ ಕಳೆಯುತ್ತಿದ್ದಂತೆ, ನಂತರ ಇವರೂ ಇದನ್ನು ಮುಂದುವರಿಸಲು ಮನಸು ಮಾಡಿಲ್ಲ. ಮಿಲ್ಮಾ ಬೂತ್ ಮುನ್ನಡೆಸಲು ಹೊಸ ಗುತ್ತಿಗೆದಾರರೂ ಮುಂದಾಗುತ್ತಿಲ್ಲ.
2022ರ ಅಕ್ಟೋಬರ್ 17ರಂದು ಮಿಲ್ಮಾ ಟ್ರಕ್ ಗ್ರಾಹಕರ ಸೇವೆ ಆರಂಭಿಸಿದ್ದು, ಮಿನಿ ಹೋಟೆಲ್ ಮಾದರಿಯಲ್ಲಿ ಬಸ್ಸನ್ನು ಸಜ್ಜುಗೊಳಿಸಲಾಗಿತ್ತು. ಬಸ್ಸಿಗೆ ಹೊಸ ಬಾಗಿಲುಗಳನ್ನು ಅಳವಡಿಸುವುದರ ಜತೆಗೆ, ಒಳಗೆ ಎಂಟು ಜನರಿಗೆ ಕುಳಿತು ಆಹಾರ ಸೇವಿಸುವ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ಮಿಲ್ಮಾ ಟ್ರಕ್ ಸಜ್ಜುಗೊಳಿಸಲಾಗಿತ್ತು. ಮಿಲ್ಮಾ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಪನೀರ್, ಲಸ್ಸಿ, ಚೀಸ್, ಐಸ್ ಕ್ರೀಮ್ ಸೇರಿದಂತೆ 74 ಉತ್ಪನ್ನಗಳು ಇಲ್ಲಿ ಲಭ್ಯವಿತ್ತು. ಪಾಲಕ್ಕಾಡ್, ಪೆರಿಂದಲ್‍ಮನ್ನ, ಕಣ್ಣೂರು ಮತ್ತು ಕೋಯಿಕ್ಕೋಡಿನಲ್ಲಿ ಇಮದಿಗೂ ಮಿಲ್ಮಾದ ಉತ್ಪನ್ನಗಳ ಟ್ರಕ್ ಕಾರ್ಯಾಚರಿಸುತ್ತಿದೆ. ಮಲಬಾರಿನ ನಾಲ್ಕನೇ ಆಹಾರ ಟ್ರಕ್ ಆಗಿ ಕಾಸರಗೋಡು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಪೈಪೋಟಿಯಿಂದ ನಷ್ಟ:
ಆರಂಭದಲ್ಲಿ ಉತ್ತಮ ವ್ಯಾಪಾರ ಹೊಂದಿದ್ದ ಮಿಲ್ಮಾ ಟ್ರಕ್ ಕ್ರಮೇಣ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಾ ಬಂದಿದೆ.
ನಗರಸಭೆಯಿಂದ ಅನುಮೋದಿತ ಎರಡು ಮಳಿಗೆಗಳು ಕೆಎಸ್ಸಾರ್ಟಿಸಿಯ ಮಿಲ್ಮಾ ಟ್ರಕ್‍ನ ಎರಡೂ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಹಾರದ ಟ್ರಕ್ ಪ್ರಾರಂಭವಾಗುವ ಮೊದಲು, ಒಂದು ಬದಿಯಲ್ಲಿ ಹಣ್ಣಿನ ಅಂಗಡಿ ಇದ್ದು, ನಂತರ ಇನ್ನೊಂದು ಕಡೆ ಕಾಸರಗೋಡು ನಗರಸಭೆ ಕುಟುಂಬಶ್ರೀ ಸಿಡಿಎಸ್‍ನ ನಗರ ಮಾರುಕಟ್ಟೆ ಪ್ರಾರಂಭವಾಗಿದೆ. ಎರಡು ಸ್ಟಾಲ್‍ಗಳಿಂದಾಗಿ ಮಿಲ್ಮಾ ಟ್ರಕ್‍ನ ವ್ಯಾಪಾರದಲ್ಲಿ ಸಂಪೂರ್ಣ ಕುಸಿತವುಟಾಗಿದೆ.