ಕಾಸರಗೋಡು : ಜಿಲ್ಲೆಯ ಮಲೆನಾಡು ಪ್ರದೇಶವನ್ನು ಸಂಪೂರ್ಣ ಕ್ವಾರಿ ಮಾಫಿಯಾ ವಶಪಡಿಸಿಕೊಂಡಿದ್ದು, ಮಾನವ ಜೀವ, ಆಸ್ತಿ ಮತ್ತು ಅರಣ್ಯದ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುವುದನ್ನು ತಡೆಯಲು ಸರ್ಕಾರ ಮತ್ತು ಅಧಿಕಾರಿ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎನ್‍ಸಿಪಿಎಸ್ ಕಾಸರಗೋಡು ಜಿಲ್ಲಾ ಪದಾಧಿಕಾರಿಗಳ ಸಭೆ ಆಗ್ರಹಿಸಿದೆ.
ಕೋಡೋಂ ಬೇಲೂರು, ಪನತ್ತಡಿ, ಕಿನಾನೂರು ಕರಿಂದಲ ಮತ್ತು ಬಳಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಕ್ವಾರಿಗಳು ವ್ಯಪಕವಾಗಿ ತಲೆ ಎತ್ತುತ್ತಿವೆ. ಕ್ವಾರಿಗಳಿಗೆ ಅಧಿಕಾರಶಾಹಿ, ರಾಜಕೀಯ ಮತ್ತು ಬಂಡವಾಳಶಾಹಿಗಳು ಆಶ್ರಯ ನೀಡುತ್ತಿದ್ದು, ಅಕ್ರಮ ಪರವಾನಗಿಯೊಂದಿಗೆ ಕಾರ್ಯಾಚರಿಸುತ್ತಿದೆ. ಇದು ಹಸಿರಿನಿಂದ ಆವೃತವಾಗಿರುವ ಬೆಟ್ಟ ಪ್ರದೇಶಗಳನ್ನು ನೆಲಸಮಗೊಳಿಸುತ್ತಿದೆ. ಈ ಮೂಲಕ ಉಂಟಾಗುತ್ತಿರುವ ಪ್ರಕೃತಿಯ ಶೋಷಣೆಯನ್ನು ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಎನ್. ಸಿ. ಪಿ ಪ್ರಬಲ ಹೋರಟಕ್ಕೆ ನೇತೃತ್ವ ನೀಡಲಿರುವುದಾಗಿ ಸಭೆ ಎಚ್ಚರಿಕೆ ನೀಡಿದೆ.
ಸಂಘಟನೆ ಜಿಲ್ಲಾಧ್ಯಕ್ಷ ಕರೀಂ ಚಂದೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸಿ. ಬಾಲನ್, ಜಿಲ್ಲಾ ಕೋಶಾಧಿಕಾರಿ ಬೆನ್ನಿ ನಾಗಮಟ್ಟಂ, ಉಪಾಧ್ಯಕ್ಷ ರಾಜು ಕೋಯನ್, ಪ್ರಧಾನ ಕಾರ್ಯದರ್ಶಿಗಳಾದ ಟಿ. ನಾರಾಯಣನ್, ಉದಿನೂರು ಸುಕುಮಾರನ್, ಒ. ಕೆ.ಬಾಲಕೃಷ್ಣನ್, ಸಿದ್ದಿಕ್ ಕೈಕಂಬ, ಸೀನತ್ ಸತೀಶನ್, ಬ್ಲಾಕ್ ಅಧ್ಯಕ್ಷರಾದ ಮುಹಮ್ಮದ್ ಕೈಕಂಬ, ರಾಹುಲ್ ನೀಲಂಕರ, ಒಬೈದುಲ್ಲಾ ಕಡವತ್, ಎನ್‍ವೈಸಿ ಜಿಲ್ಲಾಧ್ಯಕ್ಷ ಲಿಜೋ ಸೆಬಾಸ್ಟಿಯನ್, ಮೋಹನನ್ ಚುನ್ನಂಕುಲಂ ಉಪಸ್ಥಿತರಿದ್ದರು.