ಕೋಲ್ಕತ್ತ: ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವ ಹಕ್ಕೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಭಾನುವಾರ ಹೇಳಿದ್ದಾರೆ.
ಕೋಲ್ಕತ್ತ: ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವ ಹಕ್ಕೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಭಾನುವಾರ ಹೇಳಿದ್ದಾರೆ.
ಬಿರ್‌ಭುಮ್ ಜಿಲ್ಲೆಯಲ್ಲಿ ಕರ್ತವ್ಯನಿರತ ನರ್ಸ್‌ವೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ವರದಿಯಾದ ಬೆನ್ನಲ್ಲೇ, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವರೂ ಆಗಿರುವ ಸುಕಾಂತ, 'ಆಡಳಿತ ಯಂತ್ರ ವಿಫಲವಾಗಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮಮತಾ ಬ್ಯಾನರ್ಜಿ ಅವರೇ ಇದಕ್ಕೆಲ್ಲಾ ಹೊಣೆ. ಹಾಗಾಗಿ, ಹುದ್ದೆಯಲ್ಲಿ ಮುಂದುವರಿಯುವ ಯಾವ ಹಕ್ಕನ್ನೂ ಅವರು ಹೊಂದಿಲ್ಲ. ಅವರು ಮುಖ್ಯಮಂತ್ರಿ ಹುದ್ದೆ ತೊರೆದರೆ ಬಂಗಾಳದ ಪಾಲಿಗೆ ಒಳಿತಾಗಲಿದೆ' ಎಂದು ಹೇಳಿದ್ದಾರೆ.
ಬಿರ್‌ಭುಮ್ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ, ಚಿಕಿತ್ಸೆ ನೀಡುತ್ತಿದ್ದ ನರ್ಸ್‌ಗೆ ಗುಪ್ತಾಂಗ ಮುಟ್ಟಿ ದೌರ್ಜನ್ಯವೆಸಗಿದ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣ ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿರುವ ಸಂದರ್ಭದಲ್ಲೇ, ಈ ಘಟನೆ ನಡೆದಿದೆ.
'ಕಿಡಿಗೇಡಿ ತನ್ನ ಕುಟುಂಬದವರ ಸಮ್ಮುಖದಲ್ಲೇ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ. ಅವಾಚ್ಯ ಶಬ್ದಗಳಿಂದ ನಿಂದಿಸಿದ' ಎಂದು ಹೇಳಿರುವ ಸಂತ್ರಸ್ತೆ, 'ಸೂಕ್ತ ಭದ್ರತೆ ಇಲ್ಲದಿರುವುದಕ್ಕೆ ಇಂತಹ ಕೃತ್ಯಗಳು ಪದೇಪದೆ ವರದಿಯಾಗುತ್ತಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.