ನವದೆಹಲಿ: ಭ್ರಷ್ಟಾಚಾರ ಹಗರಣದಲ್ಲಿ ಜಾಮೀನಿನ ಮೂಲಕ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇನ್ನೆರಡು ದಿನಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ.
'ದೆಹಲಿ ಚುನಾವಣೆ 2025ರ ಫೆಬ್ರುವರಿಯಲ್ಲಿ ನಡೆಯಲಿದೆ ಆದರೆ ಮಹಾರಾಷ್ಟ್ರದೊಂದಿಗೆ 2024ರ ನವೆಂಬರ್‌ನಲ್ಲಿಯೇ ಚುನಾವಣೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ' ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
ಕೇಜ್ರಿವಾಲ್ ಅವರ ರಾಜೀನಾಮೆ ಹೇಳಿಕೆ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.
'ಇನ್ನೆರಡು ದಿನಗಳಲ್ಲಿ ಎಎಪಿ ಶಾಸಕರ ಸಭೆ ನಡೆಸುತ್ತೇನೆ, ಪಕ್ಷದ ನಾಯಕರೊಬ್ಬರು ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾವು ಪ್ರಾಮಾಣಿಕರು ಎಂದು ಜನರು ಹೇಳಿದಾಗ ಮಾತ್ರ ನಾನು ಮುಖ್ಯಮಂತ್ರಿಯಾಗಿ, ಸಿಸೋಡಿಯಾ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದೇವೆ' ಎಂದು ಹೇಳಿದರು.
'ಬಿಜೆಪಿ ನನ್ನನ್ನು ಭ್ರಷ್ಟ ಎಂದು ತೋರಿಸಲು ಪ್ರಯತ್ನಿಸಿತು. ಆದರೆ ಕೇಸರಿ ಪಾಳಯ ಭ್ರಷ್ಟರಾಗಿರುವ ಕಾರಣಕ್ಕೇ ಮಕ್ಕಳಿಗೆ ಉತ್ತಮ ಶಾಲೆ, ಉಚಿತ ವಿದ್ಯುತ್ ನೀಡಲು ಸಾಧ್ಯವಾಗಲಿಲ್ಲ' ಎಂದರು.
'ಅವರು ಬಿಜೆಪಿಯೇತರ ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಕೇಸುಗಳನ್ನು ಹಾಕುತ್ತಾರೆ. ಅಂತಹ ಸಂದರ್ಭದಲ್ಲಿ ರಾಜೀನಾಮೆ ನೀಡದೆ ಜೈಲಿನಿಂದ ಸರ್ಕಾರವನ್ನು ನಡೆಸುವಂತೆ ಅವರಿಗೆ (ಆರೋಪ ಹೊತ್ತವರಿಗೆ) ಒತ್ತಾಯಿಸುತ್ತೇನೆ' ಎಂದರು.
'ನಾನು ಪ್ರಜಾಪ್ರಭುತ್ವವನ್ನು ಗೌರವಿಸುವ ಕಾರಣ (ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನದ ನಂತರ) ನಾನು ರಾಜೀನಾಮೆ ನೀಡಲಿಲ್ಲ. ಸಂವಿಧಾನವು ನನಗೆ ಸರ್ವೋಚ್ಚವಾಗಿದೆ. ಬಿಜೆಪಿಯ 'ಪಿತೂರಿ' ಗಳನ್ನು ಎದುರಿಸಲು ಎಎಪಿ ಪಕ್ಷ ಸಮರ್ಥವಾಗಿದೆ' ಎಂದು ಪ್ರತಿಪಾದಿಸಿದರು.
'2014ರಲ್ಲಿ ಜನಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದನ್ನು ಉಲ್ಲೇಖಿಸಿದ ಕೇಜ್ರಿವಾಲ್, 'ಅಧಿಕಾರ ಸ್ವೀಕರಿಸಿದ ಕೇವಲ 49 ದಿನಗಳ ನಂತರ, ನಾನು ನನ್ನ ಆದರ್ಶಗಳಿಗಾಗಿ ರಾಜೀನಾಮೆ ನೀಡಿದ್ದೇನೆ. ನನಗೆ ಅಧಿಕಾರದ ಆಸೆ ಇಲ್ಲ' ಎಂದು ಹೇಳಿದರು.
ಅಬಕಾರಿ ನೀತಿ ಪ್ರಕರಣ ದೀರ್ಘ ಕಾಲ ಮುಂದುವರಿಯಲಿದೆ ಎಂದು ಹೇಳಿದ ಮುಖ್ಯಮಂತ್ರಿ, 'ನಾವು ಪ್ರಾಮಾಣಿಕರೇ ಅಥವಾ ತಪ್ಪಿತಸ್ಥರೇ ಎಂದು ದೆಹಲಿಯ ಜನರನ್ನು ಕೇಳಲು ಬಯಸುತ್ತೇನೆ. ನಮ್ಮನ್ನು ಪ್ರಾಮಾಣಿಕರೆಂದು ಪರಿಗಣಿಸಿದರೆ ಮಾತ್ರ ಮತ ಚಲಾಯಿಸಿ. ನನಗೆ ಬಿಜೆಪಿ ಮುಖ್ಯವಲ್ಲ, ಜನರೇ ಮುಖ್ಯ' ಎಂದರು.