ಕೊಲಂಬೊ: 2022ರಲ್ಲಿ ಎದುರಾದ ಆರ್ಥಿಕ ಸಂಕಷ್ಟದ ಬಳಿಕ ಮೊದಲ ಸಲ ನಡೆದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಇಂದು (ಶನಿವಾರ) ಸಂಜೆ 4ಕ್ಕೆ ಮತದಾನ ಮುಕ್ತಾಯವಾಗಿದೆ.
ಮತದಾನದ ಪ್ರಮಾಣದ ಬಗ್ಗೆ ಅಧಿಕಾರಿಗಳು ಇನ್ನಷ್ಟೇ ಅಂಕಿ-ಅಂಶ ಬಿಡುಗಡೆ ಮಾಡಬೇಕಿದೆ.
ಆರ್ಥಿಕ ಚೇತರಿಕೆಯ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವುದಾಗಿ ಹೇಳಿಕೊಂಡಿರುವ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ (75) ಅವರು 5 ವರ್ಷದ ಅವಧಿಗೆ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ.
ದೇಶದ 1.7 ಕೋಟಿ ಅರ್ಹ ಮತದಾರರಲ್ಲಿ ಮಧ್ಯಾಹ್ನ 2ರ ಹೊತ್ತಿಗೆ ಶೇ 60ರಷ್ಟು ಜನ ಹಕ್ಕು ಚಲಾಯಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
'ಸಂಜೆ 4ರ ನಂತರ ಅಂಚೆ ಮತಗಳ ಎಣಿಕೆ ಮತ್ತು ಸಂಜೆ 6ರ ನಂತರ ಸಾಮಾನ್ಯ ಮತಗಳ ಎಣಿಕೆ ಆರಂಭಿಸುತ್ತೇವೆ. ಮತ ಎಣಿಕೆ ಆರಂಭವಾದ 2 ಅಥವಾ 3 ಗಂಟೆ ಬಳಿಕ ಫಲಿತಾಂಶ ಪ್ರದರ್ಶಿಸಲು ಸಾಧ್ಯ' ಎಂದು ಕೊಲಂಬೊ ನಗರ ಉಪ ಚುನಾವಣಾ ಆಯುಕ್ತ ಎಂಕೆಎಸ್‌ಕೆಕೆ ಬಂಡಾರಮಪ ಇಂದು ಬೆಳಿಗ್ಗೆ ಹೇಳಿದ್ದರು.
ಮತದಾರರು ಹಕ್ಕು ಚಲಾಯಿಸಲು ದೇಶದಾದ್ಯಂತ 13,400 ಮತ ಕೇಂದ್ರಗಳನ್ನು ತೆರೆಯಲಾಗಿತ್ತು. ಮತದಾನ ಕರ್ತವ್ಯಕ್ಕೆ 2 ಲಕ್ಷಕ್ಕೂ ಅಧಿಕ ಸಿಬ್ಬಂದಿ ಹಾಗೂ ಭದ್ರತೆಗೆ 63 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮತದಾನವು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆದಿದೆ ಎಂದು ಪೊಲೀಸ್ ಚುನಾವಣಾ ದಳ ತಿಳಿಸಿದೆ.
ಪಲಾಯನ ಮಾಡಿದ್ದ ಅಧ್ಯಕ್ಷ
2022ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸಿದ ಶ್ರೀಲಂಕಾ, ದೇಶದಾದ್ಯಂತ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ತಮ್ಮ ವಿರುದ್ಧ ಜನಾಕ್ರೋಶ ವ್ಯಕ್ತವಾದ ಕಾರಣ ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಷ ಜುಲೈನಲ್ಲಿ ದೇಶದಿಂದ ಪಲಾಯನ ಮಾಡಿದ್ದರು.
ಬಳಿಕ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರಾಗಿ ಸಂಸತ್ತು ನೇಮಕ ಮಾಡಿತ್ತು. ಅವರು, ದೇಶವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮುಂದುವರಿಸಿದ್ದಾರೆ. ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ತಜ್ಞರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.