ನವದೆಹಲಿ: ಲೋಕಪಾಲ ಸಂಸ್ಥೆ ಕುರಿತ ಕಾಯ್ದೆಯು ಜಾರಿಗೆ ಬಂದ ಒಂದು ದಶಕದ ನಂತರ, ಸಾರ್ವಜನಿಕ ಸೇವಕರ ವಿರುದ್ಧ ಲಂಚಕ್ಕೆ ಸಂಬಂಧಿಸಿದಂತೆ ದಾಖಲಾಗುವ ದೂರುಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ವಿಚಾರಣಾ ವಿಭಾಗವನ್ನು ರಚಿಸಲಾಗಿದೆ.
2014ರ ಜನವರಿ 1ರಂದು 'ಲೋಕಪಾಲ ಮತ್ತು ಲೋಕಾಯುಕ್ತರ ಕಾಯ್ದೆ - 2013' ಜಾರಿಗೆ ಬಂತು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ - 1988ರ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾದ ಅಪರಾಧವನ್ನು ಸಾರ್ವಜನಿಕ ಸೇವೆಯಲ್ಲಿ ಇರುವ ನಿರ್ದಿಷ್ಟ ವ್ಯಕ್ತಿಗಳು ಎಸಗಿದ್ದಾರೆ ಎಂಬ ಆರೋಪ ಬಂದಾಗ ಅದರ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಲೋಕಪಾಲ ಸಂಸ್ಥೆಯು ತನಿಖಾ ವಿಭಾಗವನ್ನು ರಚಿಸಬೇಕು ಎಂದು ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 11ರಲ್ಲಿ ಹೇಳಲಾಗಿದೆ.
ಈ ವರ್ಷದ ಆಗಸ್ಟ್ 30ರಂದು ನಡೆದ ಲೋಕಪಾಲ ಸಂಸ್ಥೆಯ ಪೂರ್ಣಪೀಠದ ಸಭೆಯಲ್ಲಿ, ತನಿಖಾ ವಿಭಾಗವನ್ನು ರಚಿಸಲಾಗಿದೆ. ಲೋಕಪಾಲ ಸಂಸ್ಥೆಯ ಅಧ್ಯಕ್ಷ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರು ಸೆಪ್ಟೆಂಬರ್ 5ರಂದು ಹೊರಡಿಸಿರುವ ಆದೇಶದಲ್ಲಿ ಈ ಉಲ್ಲೇಖ ಇದೆ. ಆಗಸ್ಟ್ 6ರಂದು ನಡೆದ ಸಭೆಯಲ್ಲಿ ಲೋಕಪಾಲ ಸಂಸ್ಥೆಯು ತನಿಖಾ ವಿಭಾಗದ ರಚನೆ, ಸ್ವರೂಪ ಹೇಗಿರಬೇಕು ಎಂಬುದಕ್ಕೆ ಒಪ್ಪಿಗೆ ನೀಡಿತ್ತು.
ತನಿಖಾ ವಿಭಾಗಕ್ಕೆ ಒಬ್ಬರು ನಿರ್ದೇಶಕರು ಇರುತ್ತಾರೆ. ಇವರು ಲೋಕಪಾಲ ಅಧ್ಯಕ್ಷರ ಅಧೀನದಲ್ಲಿ ಕೆಲಸ ಮಾಡುತ್ತಾರೆ. ನಿರ್ದೇಶಕರ ಅಧೀನದಲ್ಲಿ ಮೂವರು ಎಸ್‌ಪಿಗಳು (ಸಾಮಾನ್ಯ, ಆರ್ಥಿಕ ಮತ್ತು ಬ್ಯಾಂಕಿಂಗ್, ಸೈಬರ್ ವಿಭಾಗಕ್ಕೆ ಒಬ್ಬರಂತೆ) ಇರುತ್ತಾರೆ. ಎಸ್‌ಪಿಗಳಿಗೆ ನೆರವಾಗಲು ತನಿಖಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಇರುತ್ತಾರೆ.
ಪ್ರಾಸಿಕ್ಯೂಷನ್ ವಿಭಾಗವೊಂದನ್ನು ರಚಿಸಲು ಕೂಡ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ ಆ ವಿಭಾಗದ ರಚನೆ ಇನ್ನೂ ಆಗಿಲ್ಲ.
ಈಗ ಲೋಕಪಾಲ ಸಂಸ್ಥೆಯಲ್ಲಿ ಇಬ್ಬರು ಸದಸ್ಯರ ಹುದ್ದೆಗಳು ಖಾಲಿ ಇವೆ. ಅಧ್ಯಕ್ಷರ ನೇತೃತ್ವದಲ್ಲಿ ಕೆಲಸ ಮಾಡುವ ಈ ಸಂಸ್ಥೆಯಲ್ಲಿ ಗರಿಷ್ಠ ಎಂಟು ಮಂದಿ ಸದಸ್ಯರು ಇರಲು ಅವಕಾಶವಿದೆ. ಈ ಪೈಕಿ ನಾಲ್ಕು ಮಂದಿ ನ್ಯಾಯಾಂಗ ಸದಸ್ಯರು ಹಾಗೂ ಇನ್ನು ನಾಲ್ಕು ಮಂದಿ ನ್ಯಾಯಾಂಗದ ಹೊರಗಿನ ಸದಸ್ಯರಾಗಿರುತ್ತಾರೆ. ಈಗ ಸಂಸ್ಥೆಯಲ್ಲಿ ಮೂವರು ನ್ಯಾಯಾಂಗದ ಸದಸ್ಯರು ಇದ್ದಾರೆ, ಇನ್ನು ಮೂವರು ನ್ಯಾಯಾಂಗದ ಹೊರಗಿನ ಸದಸ್ಯರಿದ್ದಾರೆ.