ನವದೆಹಲಿ: ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಭಾರತದ ಬಗ್ಗೆ 'ತಪ್ಪುದಾರಿಗೆ ಎಳೆಯುವಂತಹ, ಆಧಾರವಿಲ್ಲದ ಹಾಗೂ ಸತ್ಯವಲ್ಲದ' ಮಾತುಗಳನ್ನು ಆಡುತ್ತಿರುವುದು ಹಾಗೂ ಆ ಮೂಲಕ ಅವರು ಭಾರತದ ಘನತೆಯನ್ನು ಹಾಳು ಮಾಡುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಚೀನಾ ಗಡಿ ವಿವಾದದ ಕುರಿತಾಗಿ ರಾಹುಲ್ ಅವರು ನೀಡಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಸಿಂಗ್ ಹೇಳಿದ್ದಾರೆ. ಇಂತಹ ತಪ್ಪು ಹೇಳಿಕೆಗಳನ್ನು ನೀಡಬಾರದು ಎಂದು ಅವರು ರಾಹುಲ್ ಅವರನ್ನು 'ಎಕ್ಸ್' ಬರಹದ ಮೂಲಕ ಆಗ್ರಹಿಸಿದ್ದಾರೆ.
'ಸಿಖ್ ಸಮುದಾಯದವರಿಗೆ ಭಾರತದ ಗುರುದ್ವಾರಗಳಲ್ಲಿ ಟರ್ಬನ್ ಧರಿಸಲು ಅವಕಾಶ ಕೊಡುತ್ತಿಲ್ಲ, ಸಿಖ್ಖರು ಅವರ ಧರ್ಮಕ್ಕೆ ಅನುಗುಣವಾಗಿ ವರ್ತಿಸುವುದನ್ನು ತಡೆಯಲಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ. ಇವು ಸಂಪೂರ್ಣವಾಗಿ ಆಧಾರವಿಲ್ಲದ ಮಾತುಗಳು' ಎಂದು ಸಿಂಗ್ ಅವರು ಹೇಳಿದ್ದಾರೆ.
ಭಾರತದ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಸಿಖ್ಖರು ವಹಿಸಿದ ಬಹುದೊಡ್ಡ ಪಾತ್ರವನ್ನು ಇಡೀ ದೇಶ ಗುರುತಿಸಿದೆ, ಅದನ್ನು ಗೌರವಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.
- ರಾಜನಾಥ ಸಿಂಗ್ ರಕ್ಷಣಾ ಸಚಿವಪ್ರೀತಿಯ ಅಂಗಡಿಯನ್ನು ನಡೆಸುವ ಹೊತ್ತಿನಲ್ಲಿ ರಾಹುಲ್ ಅವರು ಸುಳ್ಳುಗಳ ಅಂಗಡಿಯನ್ನು ತೆರೆದಿರುವಂತಿದೆ.- ಕಿರಣ್ ರಿಜಿಜು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಲ್ಪಸಂಖ್ಯಾತರು ಭಾರತದಲ್ಲಿ ಅತ್ಯಂತ ಹೆಚ್ಚು ಸುರಕ್ಷತೆ ಹೊಂದಿದ್ದಾರೆ. ನೆರೆ ದೇಶಗಳಲ್ಲಿನ ಅಲ್ಪಸಂಖ್ಯಾತರು ಅಲ್ಲಿ ತಮಗೇನಾದರೂ ಆದರೆ ಭಾರತಕ್ಕೆ ಬರುತ್ತಾರೆ.ರಾಹುಲ್ ಗಾಂಧಿ ಹೇಳಿದ್ದೇನು?
ಮೀಸಲಾತಿ ಕುರಿತು ರಾಹುಲ್ ಹೇಳಿದ್ದ ಮಾತು ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದೂ ಅವರು ಹೇಳಿದ್ದರು.
ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಅವರು ಈ ಮಾತು ಹೇಳಿದ್ದರು.
'ಹಣಕಾಸಿನ ಅಂಕಿ-ಅಂಶಗಳನ್ನು ಗಮನಿಸಿದಾಗ; ಪ್ರತಿ ₹100ರಲ್ಲಿ ಆದಿವಾಸಿ ಸಮುದಾಯಗಳಿಗೆ ಸಿಗುತ್ತಿರುವುದು 10 ಪೈಸೆ ಮಾತ್ರ ದಲಿತರಿಗೆ ಸಿಗುತ್ತಿರುವುದು ₹5 ಒಬಿಸಿಗಳಿಗೆ ಕೂಡ ಸರಿಸುಮಾರು ಇಷ್ಟೇ ಮೊತ್ತ ಸಿಗುತ್ತಿದೆ ಎಂಬುದು ಗೊತ್ತಾಗುತ್ತದೆ. ಈ ಸಮುದಾಯಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಸಿಗುತ್ತಿಲ್ಲ ಎಂಬುದು ವಾಸ್ತವ' ಎಂದಿದ್ದರು.
'ದೇಶದ ಶೇ 90ರಷ್ಟು ಮಂದಿಗೆ ಪಾಲುದಾರಿಕೆಯ ಅವಕಾಶ ಸಿಗುತ್ತಿಲ್ಲ. ಭಾರತದ ಉದ್ಯಮಿಗಳ ಪಟ್ಟಿಯನ್ನು ಗಮನಿಸಿ. ಆದಿವಾಸಿ ಸಮುದಾಯಗಳಿಗೆ ಸೇರಿದವರ ಹೆಸರನ್ನು ತೋರಿಸಿ ದಲಿತರ ಹೆಸರು ತೋರಿಸಿ ಒಬಿಸಿ ಹೆಸರು ತೋರಿಸಿ. ಮುಂಚೂಣಿ 200 ಉದ್ಯಮಿಗಳ ಪೈಕಿ ಒಬಿಸಿಗೆ ಸೇರಿದ ಒಬ್ಬರು ಮಾತ್ರ ಇದ್ದಾರೆ. ಒಬಿಸಿಗೆ ಸೇರಿದವರ ಸಂಖ್ಯೆಯು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿದೆ. ಆದರೆ ನಾವು ರೋಗಲಕ್ಷಣಕ್ಕೆ ಚಿಕಿತ್ಸೆ ನೀಡುತ್ತಿಲ್ಲ' ಎಂದು ಅವರು ವಿವರಿಸಿದ್ದರು.