HEALTH TIPS

ಸೇನಾ ಅಧಿಕಾರಿ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

 ಭುವನೇಶ್ವರ: 'ಅನುಚಿತ ವರ್ತನೆ ತೋರಿದ್ದ ಆರೋಪದಡಿ ವಶಕ್ಕೆ ಪಡೆಯಲಾಗಿದ್ದ ತಮ್ಮ ಮೇಲೆ ಪೊಲೀಸರು ಠಾಣೆಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿದರು' ಎಂದು ಸೇನಾ ಅಧಿಕಾರಿಯೊಬ್ಬರ ಗೆಳತಿಯು ಗಂಭೀರ ಆರೋಪ ಮಾಡಿದ್ದಾರೆ.

ಸಂತ್ರಸ್ತೆ, ಸೇನಾಧಿಕಾರಿಯ ಗೆಳತಿಯನ್ನು ರಾಜಧಾನಿಯ ಭರತ್‌ಪುರ್ ಠಾಣೆಯ ಪೊಲೀಸರು ಸೆಪ್ಟೆಂಬರ್ 1ರಂದು ವಶಕ್ಕೆ ಪಡೆದಿದ್ದರು.

ಹೈಕೋರ್ಟ್‌ನ ಜಾಮೀನು ಆಧರಿಸಿ ಗುರುವಾರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಮಹಿಳೆ ನಗರದಲ್ಲಿ ರೆಸ್ಟೋರೆಂಟ್‌ ನಡೆಸುತ್ತಿದ್ದಾರೆ.

ಕೆಲ ಸ್ಥಳೀಯ ಯುವಕರು ಸೇನಾ ಅಧಿಕಾರಿ, ಅವರ ಗೆಳತಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದರು. ಹೀಗಾಗಿ ನೆರವು ಕೋರಿ ಠಾಣೆಗೆ ತೆರಳಿದ್ದರು. ಅಲ್ಲಿ ಪೊಲೀಸ್‌ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆದಿತ್ತು. ಅನುಚಿತವಾಗಿ ವರ್ತಿಸಿದ ಆರೋಪದಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಯಿತು ಹಾಗೂ ಹಲ್ಲೆ ಮಾಡಲಾಯಿತು ಎಂಬುದು ಮಹಿಳೆಯ ಆರೋಪ.

ಈ ಪ್ರಕರಣವೀಗ ಒಡಿಶಾದಲ್ಲಿ ಬಿಸಿ ಚರ್ಚೆಗೆ ಒಳಪಟ್ಟಿದೆ. ಸಂತ್ರಸ್ತ ಮಹಿಳೆಯು ಸದ್ಯ ಭುವನೇಶ್ವರದ 'ಏಮ್ಸ್‌'ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಕೃತ್ಯದ ತನಿಖೆಗೆ ಎಸ್‌ಐಟಿ ರಚಿಸಬೇಕು ಹಾಗೂ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಪಡಿಸಿದ್ದಾರೆ. 'ಮೇಜರ್‌ವೊಬ್ಬರ ಗೆಳತಿ ಮೇಲೆ ನಡೆಸಿರುವ ದೌರ್ಜನ್ಯ ದಿಗ್ಭ್ರಮೆಗೊಳಿಸುವಂತಹದ್ದು' ಎಂದು ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ, ಸಿಸಿಬಿ ಪೊಲೀಸರು ಭರತ್‌ಪುರ್‌ ಠಾಣೆಯ ಅಧಿಕಾರಿ, ಇನ್‌ಸ್ಪೆಕ್ಟರ್ ದಿನಕೃಷ್ಣ ಮಿಶ್ರಾ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಬೈಸಲಿನಿ ಪಾಂಡಾ, ಸಲಿಲಾಮಯೀ ಸಾಹೂ, ಸಾಗರಿಕಾ ರತ್ ಮತ್ತು ಕಾನ್‌ಸ್ಟೆಬಲ್‌ ಬಲರಾಮ್‌ ಹನ್‌ಸ್ದಾ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿದ್ದಾರೆ. ಅನುಚಿತ ವರ್ತನೆ ತೋರಿದ ಆರೋಪದಡಿ ಈ ಐವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಮತ್ತೊಂದೆಡೆ, ಒಡಿಶಾದ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಘಟನೆಯನ್ನು ತನಿಖೆಗೆ ಪರಿಗಣಿಸಿ, ವಿಚಾರಣೆ ಆರಂಭಿಸಿದೆ. ಅಧ್ಯಕ್ಷೆ ಮಿನತಿ ಬೆಹರಾ ಅವರೇ ಖುದ್ದು ಠಾಣೆಗೆ ಭೇಟಿ ನೀಡಿದ್ದು, ಘಟನೆಯ ವಿವರ ಹಾಗೂ ಸಂಬಂಧಿಸಿ ಕೆಲ ದಾಖಲೆಗಳನ್ನೂ ಪಡೆದಿದ್ದಾರೆ.

'ಘಟನೆ ಕುರಿತಂತೆ ಡಿಜಿಪಿ ಅವರಿಗೆ ಪತ್ರ ಬರೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮೂರು ದಿನದಲ್ಲಿ ವರದಿ ಸಲ್ಲಿಸಬೇಕು. ತುರ್ತಾಗಿ ಶಿಸ್ತುಕ್ರಮ ಜರುಗಿಸುವುದನ್ನು ಎದುರುನೋಡುತ್ತಿದ್ದೇವೆ' ಮಹಿಳಾ ಆಯೋಗವು 'ಎಕ್ಸ್‌' ಮೂಲಕ ತಿಳಿಸಿದೆ.

ಸೇನಾ ಅಧಿಕಾರಿ ಮತ್ತು ಅವರ ಗೆಳತಿಯ ಜೊತೆಗೆ ಅನುಚಿತವಾಗಿ ವರ್ತಿಸಿರುವ ಸಂಬಂಧ ಕೆಲ ಅಪರಿಚಿತರ ವಿರುದ್ಧ ಚಂದಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Quote - ನಾನು ಸಂತ್ರಸ್ತೆ ಮನೆಗೂ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಅಗತ್ಯ ದಾಖಲೆ ಸಂಗ್ರಹಿಸಿದ ಬಳಿಕ ಕೃತ್ಯದ ಸಮಗ್ರ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗುವುದು. ತುರ್ತು ಕ್ರಮಕ್ಕಾಗಿ ಡಿಜಿಪಿ ಅವರಿಗೂ ಪತ್ರ ಬರೆಯಲಾಗಿದೆ. ಮಿನತಿ ಬೆಹೆರಾ ಅಧ್ಯಕ್ಷ ಒಡಿಶಾ ಮಹಿಳಾ ಆಯೋಗ

ಸುಲೋಚನಾ ದಾಸ್‌ ಬಿಜೆಡಿ ನಾಯಕಿ ಮೇಯರ್ ಭುವನೇಶ್ವರಲೈಂಗಿಕ ದೌರ್ಜನ್ಯ ಆರೋಪ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ರಾಜಭವನದ ಎದುರು ಶನಿವಾರ ಪ್ರತಿಭಟನೆ ನಡೆಸಲಿದ್ದೇವೆ. ಅಲ್ಲದೆ ಈ ಸಂಬಂಧ ರಾಷ್ಟ್ರಪತಿ ಅವರಿಗೂ ಮನವಿ ಸಲ್ಲಿಸಲಿದ್ದೇವೆ. ಸೋನಾಲಿ ಸಾಹು ಮೈಶಾ ದಾಸ್ ಕಾಂಗ್ರೆಸ್ ಪಕ್ಷದ ಮುಖಂಡರುಕಾಂಗ್ರೆಸ್‌ ಪಕ್ಷ ಈ ಘಟನೆಯನ್ನು ಕಟುವಾಗಿ ಖಂಡಿಸಲಿದೆ. ರಾಜ್ಯದಲ್ಲಿ 'ತಾಲಿಬಾನಿ ಸರ್ಕಾರ' ಮಾದರಿಯ ಆಡಳಿತವಿದೆ.

'ಎದೆ ಭಾಗಕ್ಕೆ ಹಲವು ಬಾರಿ ಒದ್ದರು ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದರು...'

ಸಂತ್ರಸ್ತ ಮಹಿಳೆಯು ಜಾಮೀನು ಪಡೆದು ಬಿಡುಗಡೆಯಾದ ಶುಕ್ರವಾರ ಸುದ್ದಿಗಾರರ ಜೊತೆಗೆ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. 'ರೆಸ್ಟೋರೆಂಟ್‌ ಮುಚ್ಚಿದ ಬಳಿಕ ರಾತ್ರಿ ಗೆಳೆಯ ಸೇನಾ ಅಧಿಕಾರಿ ಜೊತೆಗೆ ಮನೆಗೆ ಮರಳುತ್ತಿದ್ದೆ. ಆಗ ಕೆಲ ಯುವಕರು ಅನುಚಿತವಾಗಿ ವರ್ತಿಸಿದರು. ಆಗ ನೆರವು ಕೋರಿ ಭರತ್‌ಪುರ್ ಠಾಣೆಗೆ ತೆರಳಿದ್ದೆವು. ಅಲ್ಲಿ ಸಾಮಾನ್ಯ ಉಡುಪಿನಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ದೂರು ದಾಖಲಿಸಿಕೊಳ್ಳದೆ ನನ್ನನ್ನೇ ನಿಂದಿಸಿದರು' ಎಂದು ಸಂತ್ರಸ್ತೆ ಆರೋಪಿಸಿದರು. 'ಕೆಲ ಹೊತ್ತಿನ ಬಳಿಕ ಇನ್ನಷ್ಟು ಸಿಬ್ಬಂದಿ ಠಾಣೆಗೆ ಬಂದಿದ್ದು ದೂರು ಬರೆದುಕೊಡುವಂತೆ ನನ್ನ ಗೆಳೆಯನಿಗೆ ತಿಳಿಸಿದರು. ನನ್ನ ಗೆಳೆಯನನ್ನೇ ಪೊಲೀಸರು ಲಾಕ್‌ಅಪ್‌ಗೆ ತಳ್ಳಿದರು. 'ನೀವು ಹೀಗೆ ಸೇನಾ ಅಧಿಕಾರಿಯನ್ನು ಬಂಧಿಸಲಾಗದು. ಇದು ಕಾನೂನುಬಾಹಿರ' ಎಂದು ನಾನು ತೀವ್ರವಾಗಿ ಪ್ರತಿಭಟಿಸಿದೆ. ಆಗ ಇಬ್ಬರು ಮಹಿಳಾ ಅಧಿಕಾರಿಗಳು ನನ್ನ ಮೇಲೆಯೇ ಹಲ್ಲೆ ಮಾಡಿದರು' ಎಂದು ವಿವರಿಸಿದರು. 'ಆಗಲೂ ನಾನು ಪ್ರತಿರೋಧ ವ್ಯಕ್ತಪಡಿಸಿದೆ. ಆದರೆ ಮಹಿಳಾ ಅಧಿಕಾರಿಗಳು ನನ್ನ ಕತ್ತನ್ನು ಬಿಗಿಯಾಗಿ ಹಿಡಿದಿದ್ದರು. ಬಳಿಕ ನನ್ನ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿ ಕೊಠಡಿಯೊಂದರಲ್ಲಿ ಕೂಡಿಹಾಕಿದರು. ಕೆಲಹೊತ್ತಿನ ನಂತರ ಬಂದ ಪುರುಷ ಅಧಿಕಾರಿಯೊಬ್ಬರು ನನ್ನನ್ನು ಇರಿಸಿದ್ದ ಕೊಠಡಿಯ ಬಾಗಿಲು ತೆರೆದು ನನ್ನ ಎದೆಗೆ ಹಲವು ಬಾರಿ ಒದ್ದರು. ನಾನು ಧರಿಸಿದ್ದ ಪ್ಯಾಂಟ್ ಅನ್ನು ಕೆಳಗೆ ಜಾರಿಸಿದರು. ತನ್ನ ಪ್ಯಾಂಟ್‌ ಅನ್ನು ಕಳಚಿದ ಅವರು ಗುಪ್ತಾಂಗವನ್ನು ತೋರಿಸುತ್ತಾ 'ಸುಮ್ಮನಿರಲು ನಿನಗೆ ಎಷ್ಟು ಸಮಯ ಬೇಕು' ಎಂದು ಪ್ರಶ್ನಿಸಿದರು' ಎಂದು ಸಂತ್ರಸ್ತೆ ಆರೋಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries