ಇಂಫಾಲ : ಇಂಫಾಲದ ಪಶ್ಚಿಮ ಜಿಲ್ಲೆಯಲ್ಲಿ ಶಂಕಿತ ಉಗ್ರರು ಡ್ರೋನ್ ಬಳಸಿ ನಡೆಸಿದ ಬಾಂಬ್ ದಾಳಿಯಲ್ಲಿ 23 ವರ್ಷದ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಸಂಜೆ 6.20ರ ಸುಮಾರಿಗೆ ವಸತಿ ಪ್ರದೇಶದಲ್ಲಿ ದಾಳಿ ನಡೆದಿದೆ.
ಕಾಂಗ್‌ಪೊಕ್ಪಿ ಜಿಲ್ಲೆಯ ತಗ್ಗು ಪ್ರದೇಶದ ಸೆಜಮ ಚಿರಾಂಗ್ ಗ್ರಾಮದ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸ್ಥಳವು ಕೌತ್ರುಕದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಭಾನುವಾರ (ಸೆ.1) ನಡೆದ ಬಾಂಬ್ ಮತ್ತು ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು 9 ಮಂದಿ ಗಾಯಗೊಂಡಿದ್ದರು.
ಭಯೋತ್ಪಾದನಾ ಕೃತ್ಯ ಎಂದ ಮಣಿಪುರ ಸಿಎಂ:
ಡ್ರೋನ್‌ಗಳನ್ನು ಬಳಸಿ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸುವುದು ಭಯೋತ್ಪಾದನಾ ಕೃತ್ಯವಾಗಿದೆ. ಇಂತಹ ಹೇಡಿತನದ ಕೃತ್ಯಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಮಣಿಪುರ ರಾಜ್ಯ ಸರ್ಕಾರವು ಇಂತಹ ಅಪ್ರಚೋದಿತ ದಾಳಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಈ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡಲು ಅಗತ್ಯ ಕ್ರಮ ಕೈಗೊಳ್ಳುತ್ತದೆ' ಎಂದಿದ್ದಾರೆ.
'ನಾವು ಹಿಂಸಾಚಾರಗಳನ್ನು ಖಂಡಿಸುತ್ತೇವೆ. ಮಣಿಪುರದ ಜನರು ದ್ವೇಷ, ವಿಭಜನೆ ಮತ್ತು ಪ್ರತ್ಯೇಕತಾವಾದದ ವಿರುದ್ಧ ಒಟ್ಟಾಗಿ ಹೋರಾಡಬೇಕು' ಎಂದು ಅವರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ, ಸ್ಫೋಟಕ ವಶ:
ಏತನ್ಮಧ್ಯೆ, ಕಾಂಗ್‌ಪೊಕ್ಪಿ ಜಿಲ್ಲೆಯ ಕಾಂಗ್‌ಚುಪ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಡ್ರೋನ್, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.