ನವದೆಹಲಿ: 'ಭಾರತ ಸರ್ಕಾರದ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ದಾವೆ ಹೂಡಿರುವ, ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಕುರಿತು ಹೆಚ್ಚಿಗೆ ಹೇಳಬೇಕಿಲ್ಲ. ಈಗ ಮೊಕದ್ದಮೆ ಹೂಡಲಾಗಿದ್ದರೂ, ಪನ್ನೂ ಹಾಗೂ ಆತ ಪ್ರತಿನಿಧಿಸುವ ಸಂಘಟನೆ ಕುರಿತ ನಮ್ಮ ನಿಲುವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಗುರುವಾರ ಹೇಳಿದ್ದಾರೆ.
ಭಾರತ ಸರ್ಕಾರ, ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ಡೊಭಾಲ್ ಹಾಗೂ ಇತರರ ವಿರುದ್ಧ ಪನ್ಣೂ ಹೂಡಿರುವ ಮೊಕದ್ದಮೆ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
'ಈ ವ್ಯಕ್ತಿ ಪ್ರತಿನಿಧಿಸುವ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆ ಹಲವಾರು ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿತ್ತು. ದೇಶದ ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ಯುಎಪಿಎ ಅಡಿ ಇದನ್ನು ಕಾನೂನುಬಾಹಿರ ಸಂಘಟನೆ ಎಂಬುದಾಗಿ ಘೋಷಿಸಲಾಗಿದೆ' ಎಂದರು.
ಅಮೆರಿಕ ಭೇಟಿ ವೇಳೆ, ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ಸಭೆಯಲ್ಲಿ ಖಾಲಿಸ್ತಾನ ವಿಷಯ ಪ್ರಸ್ತಾಪಗೊಳ್ಳುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಮಿಸ್ರಿ ಅವರು ನೇರ ಉತ್ತರ ನೀಡಲಿಲ್ಲ.