HEALTH TIPS

ಭದ್ರತಾ ಮಂಡಳಿ ಸದಸ್ಯತ್ವ ವಿಸ್ತರಣೆಗೆ 'ಕ್ವಾಡ್' ಕರೆ | ಗಾಝಾದಲ್ಲಿ ತುರ್ತು ಯುದ್ಧವಿರಾಮಕ್ಕೆ ಒತ್ತಾಯ

         ಡೆಲಾವೇರ್  : ಭಾರತ, ಅಮೆರಿಕ, ಆಸ್ಟ್ರೇಲಿಯ ಮತ್ತು ಜಪಾನ್ ದೇಶಗಳನ್ನು ಒಳಗೊಂಡ ನಾಲ್ಕು ದೇಶಗಳ ಗುಂಪು 'ಕ್ವಾಡ್'ನ ನಾಯಕರು ಶನಿವಾರ, ಉಕ್ರೇನ್ ಸಂಘರ್ಷ, ಗಾಝಾದಲ್ಲಿ ಮುಂದುವರಿಯುತ್ತಿರುವ ಯುದ್ಧ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ಸುಧಾರಣೆಗಳು ಸೇರಿದಂತೆ ಪ್ರಮುಖ ಜಾಗತಿಕ ಸಮಸ್ಯೆಗಳ ಬಗ್ಗೆ ಜಂಟಿ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.

        ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ತವರು ಪಟ್ಟಣ ಡೆಲಾವೇರ್‌ನಲ್ಲಿ ನಡೆದ ಶೃಂಗಸಭೆಯ ಬಳಿಕ, ಕ್ವಾಡ್ ನಾಯಕರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಾತಿನಿಧಿಕ ಮತ್ತು ಉತ್ತರದಾಯಿಯಾಗಿಸಲು ಅದಕ್ಕೆ ತುರ್ತು ಸುಧಾರಣೆಗಳನ್ನು ತರಬೇಕೆಂದು ಕರೆ ನೀಡಿದ್ದಾರೆ. ಅದೂ ಅಲ್ಲದೆ, ಆಫ್ರಿಕ, ಏಶ್ಯ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ಗೆ ಪ್ರಾತಿನಿಧ್ಯ ನೀಡುವುದಕ್ಕಾಗಿ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವನ್ನು ವಿಸ್ತರಿಸಬೇಕು ಎಂಬುದಾಗಿಯೂ ಅವರು ಕರೆ ನೀಡಿದ್ದಾರೆ.

''ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಾತಿನಿಧಿಕ, ಸರ್ವರನ್ನೂ ಒಳಗೊಳ್ಳುವ, ಪಾರದರ್ಶಕ, ದಕ್ಷ, ಪರಿಣಾಮಕಾರಿ, ಪ್ರಜಾಸತ್ತಾತ್ಮಕ ಮತ್ತು ಉತ್ತರದಾಯಿ ಆಗಿಸುವ ಮೂಲಕ ನಾವು ಅದಕ್ಕೆ ಸುಧಾರಣೆಗಳನ್ನು ತರುತ್ತೇವೆ. ಈ ನಿಟ್ಟಿನಲ್ಲಿ ಅದರ ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯತ್ವಗಳನ್ನು ವಿಸ್ತರಿಸುವುದಕ್ಕಾಗಿ ಶ್ರಮಿಸುತ್ತಿದ್ದೇವೆ'' ಎಂದು ಜಂಟಿ ಹೇಳಿಕೆ ತಿಳಿಸಿದೆ.

ಉಕ್ರೇನ್‌ನಲ್ಲಿ ನೆಲೆಸಿರುವ ಮಾನವೀಯ ಬಿಕ್ಕಟ್ಟು ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ವಾಡ್ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಅಂತರ್‌ರಾಷ್ಟ್ರೀಯ ಕಾನೂನು, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ತಾವು ಹೊಂದಿರುವ ಬದ್ಧತೆಯನ್ನು ಅವರು ಖಚಿತಪಡಿಸಿದರು.

         ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದ ಅವರು, ಸಮಗ್ರ ಮತ್ತು ನ್ಯಾಯೋಚಿತ ಶಾಂತಿಯ ಅಗತ್ಯವನ್ನು ಪ್ರತಿಪಾದಿಸಿದರು.

        ಜಾಗತಿಕ ಆಹಾರ ಮತ್ತು ಇಂಧನ ಭದ್ರತೆಗೆ, ಅದರಲ್ಲೂ ಮುಖ್ಯವಾಗಿ ಅಭಿವದ್ಧಿಶೀಲ ದೇಶಗಳ ಆಹಾರ ಮತ್ತು ಇಂಧನ ಭದ್ರತೆಗೆ ಉಕ್ರೇನ್ ಯುದ್ಧವು ಅಪಾಯವಾಗಿದೆ ಎಂದು ಕ್ವಾಡ್ ನಾಯಕರು ಅಭಿಪ್ರಾಯಪಟ್ಟರು.

          ಪರಮಾಣು ಶಸ್ತ್ರಗಳ ಬಳಕೆ ಅಸ್ವೀಕಾರಾರ್ಹ ಎಂಬುದಾಗಿ ರಶ್ಯವನ್ನು ಹೆಸರಿಸದೆ ಅವರು ಘೋಷಿಸಿದರು. ''ಈ ಯುದ್ಧದ ಹಿನ್ನೆಲೆಯಲ್ಲಿ, ಪರಮಾಣು ಶಸ್ತ್ರಗಳ ಬಳಕೆ ಅಥವಾ ಬಳಕೆಯ ಅಪಾಯವು ಅಸ್ವೀಕಾರಾರ್ಹ ಎಂಬ ನಮ್ಮ ನಿಲುವನ್ನು ಘೋಷಿಸಲು ಬಯಸುತ್ತೇವೆ. ವಿಶ್ವಸಂಸ್ಥೆಯ ಒಪ್ಪಂದಗಳಿಗೆ ಅನುಸಾರವಾಗಿ ಅಂತರ್ರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಬೇಕಾದ ಮಹತ್ವವನ್ನು ನಾವು ಎತ್ತಿಹಿಡಿಯುತ್ತೇವೆ. ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಮಾಡುವ ಅಥವಾ ಬಲಪ್ರಯೋಗದ ಬೆದರಿಕೆಯಿಂದ ದೇಶಗಳು ಹಿಂದಕ್ಕೆ ಸರಿಯಬೇಕೆಂದು ನಾವು ಪುನರುಚ್ಚರಿಸುತ್ತೇವೆ'' ಎಂದು ಹೇಳಿಕೆ ತಿಳಿಸಿದೆ.

► ಗಾಝಾಕ್ಕೆ ಮಾನವೀಯ ನೆರವಿಗೆ ಕರೆ

       ಗಾಝಾ ಸಂಘರ್ಷಕ್ಕೆ ಸಂಬಂಧಿಸಿ, ಕ್ವಾಡ್ ನಾಯಕರು ಅಕ್ಟೋಬರ್ 7ರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಇಸ್ರೇಲ್ ದಾಳಿಯಿಂದ ಜರ್ಝರಿತಗೊಂಡಿರುವ ಫೆಲೆಸ್ತೀನಿಯನ್ ವಲಯಕ್ಕೆ ಮಾನವೀಯ ನೆರವಿನ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.

ಗಾಝಾದಲ್ಲಿ ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕು ಎಂದು ಕರೆ ನೀಡಿರುವ ಅವರು, ಹಮಾಸ್ ಹಿಡಿದಿಟ್ಟುಕೊಂಡಿರುವ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.

             ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಅವುಗಳು ಎರಡು ಸ್ವತಂತ್ರ ದೇಶಗಳಾಗುವುದೇ ಪರಿಹಾರ ಎಂಬುದಾಗಿ ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಫೆಲೆಸ್ತೀನ್ ಸಾರ್ವಭೌಮ ದೇಶವಾಗಬೇಕು ಎಂದು ಪ್ರತಿಪಾದಿಸಿರುವ ಜಂಟಿ ಹೇಳಿಕೆಯು, ಅದೇ ವೇಳೆ, ಇಸ್ರೇಲ್‌ನ ನೈಜ ಭದ್ರತಾ ಕಳವಳವನ್ನೂ ಎತ್ತಿಹಿಡಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries