ನವದೆಹಲಿ: ಸೇನಾ ಸರಕು ಸಾಗಣೆ ವಿಮಾನಗಳ ನಿರ್ಮಾಣ ಮತ್ತು ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪನಿ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮಂಗಳವಾರ ಒಪ್ಪಂದ ಮಾಡಿಕೊಂಡಿವೆ.
ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆ ಎಂದೇ ಇದನ್ನು ಪರಿಗಣಿಸಲಾಗಿದೆ.
ಈ ಒಪ್ಪಂದವು ಭಾರತೀಯ ವಾಯುಪಡೆಯಲ್ಲಿರುವ 12 'ಸಿ-130 ಜೆ' ಸೇನಾ ಸರಕು ಸಾಗಣೆ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣಕ್ಕೆ (ಎಂಆರ್‌ಒ) ಬೇಕಾದ ಸೌಲಭ್ಯ ಹೊಂದಿರುವ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಅವಕಾಶ ಕಲ್ಪಿಸಲಿದೆ.
'ಅದೇ ರೀತಿ, ಭಾರತೀಯ ವಾಯಪಡೆಯ ಮಧ್ಯಮ ಸಾರಿಗೆ ವಿಮಾನ (ಎಂಟಿಎ) ಯೋಜನೆಗೆ ಅಗತ್ಯವಿರುವಷ್ಟು ಸಿ-130ಜೆ ವಿಮಾನಗಳ ತಯಾರಿಕೆ ಮತ್ತು ಬಿಡಿ ಭಾಗಗಳ ಜೋಡಣೆಗೆ ಅವಕಾಶ ನೀಡಲಿದೆ. ಆದರೆ ಇದು ಅಮೆರಿಕ ಮತ್ತು ಭಾರತ ಸರ್ಕಾರಗಳ ಅನುಮೋದನೆಗೆ ಒಳಪಟ್ಟಿರುತ್ತದೆ' ಎಂದು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹೇಳಿದೆ.
ತನಗೆ 80 ಮಧ್ಯಮ ಸಾರಿಗೆ ವಿಮಾನಗಳ ಅಗತ್ಯವಿದೆ ಎಂದು ಹೇಳಿದ್ದ ಭಾರತೀಯ ವಾಯುಪಡೆ (ಐಎಎಫ್), ಅದನ್ನು ಪಡೆಯುವ ನಿಟ್ಟಿನಲ್ಲಿ ಕಳೆದ ವರ್ಷ ಆರಂಭಿಕ ಟೆಂಡರ್ ಆಹ್ವಾನಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಲಾಕ್‌ಹೀಡ್ ಮಾರ್ಟಿನ್ ಕಂಪನಿ, ಐಎಎಫ್‌ನ ಅವಶ್ಯಕತೆ ಪೂರೈಸಲು 'ಸಿ-130ಜೆ ಸೂಪರ್ ಹರ್ಕ್ಯುಲಸ್' ವಿಮಾನಗಳು ಸೂಕ್ತ ಎಂದಿತ್ತು.
ಲಾಕ್‌ಹೀಡ್ ಮಾರ್ಟಿನ್ ಕಂಪನಿಯು ಅಮೆರಿಕ ಸೇನೆ ಮತ್ತು ಇತರ ದೇಶಗಳಿಗೆ ಅಗತ್ಯವಿರುವ ಸಿ-130ಜೆ ವಿಮಾನಗಳ ನಿರ್ಮಾಣವನ್ನು ಅಮೆರಿಕದ ಜಾರ್ಜಿಯಾದಲ್ಲಿರುವ ಘಟಕದಲ್ಲೇ ಮುಂದುವರಿಸಲಿದೆ. ಐಎಎಫ್‌ನ ಎಂಟಿಎ ಯೋಜನೆಗೆ ಇದೇ ವಿಮಾನಗಳನ್ನು ಪೂರೈಸಲು ಅನುಮತಿ ದೊರೆತರೆ ಭಾರತದಲ್ಲಿ ಘಟಕ ತೆರೆಯಲಿದೆ.