ಕಾಸರಗೋಡು: ವನ್ಯಮೃಗಗಳ ಹಾವಳಿಯಿಂದ ತತ್ತರಿಸಿರುವ ಮಲೆನಾಡು ಪ್ರದೇಶ ಇರಿಯಣ್ಣಿ ಜನತೆಯನ್ನು ಚಿರತೆ ಸಂಚಾರದ ವದಂತಿ ನಿದ್ದೆಗೆಡಿಸುವಂತೆ ಮಾಡಿದೆ. ಇರಿಯಣ್ಣಿ ಸನಿಹದ ಚೆಟ್ಟುತ್ತೋಡು ನಿವಾಸಿ ಅನಿಲ್ ಕುಮಾರ್ ಎಂಬವರ ತೋಟದಲ್ಲಿ ಚಿರತೆಯದ್ದೆನ್ನಲಾದ ಹೆಜ್ಜೆ ಗುರುತು ಅಲ್ಲಲ್ಲಿ ಕಂಡು ಬಂದಿದ್ದು, ವದಂತಿಗೆ ಪುಷ್ಟಿ ನೀಡಿದೆ.
ಈ ಪ್ರದೇಶದಲ್ಲಿ ಚಿರತೆ ಕಂಡುಬರುತ್ತಿರುವ ಬಗ್ಗೆ ದೂರು ಲಭಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇರಿಯಣ್ಣಿ ಪ್ರದೇಶದ ನಾಲ್ಕು ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದರೂ, ಚಿರತೆ ಸಂಚಾರದ ದೃಶ್ಯಾವಳಿ ಇದರಲ್ಲಿ ಗೋಚರಿಸಿಲ್ಲ ಎಂಬುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇರಿಯಣ್ಣಿ ಸನಿಹದ ಕುಣಿಯೇರಿಯಲ್ಲಿ ಎರಡು ದಿವಸಗಳ ಹಿಂದೆ ಚಿರತೆಯೊಂದು ಸಥಳೀಯರಿಗೆ ಗೋಚರಿಸಿದ್ದು, ಅಲ್ಲಿಂದ ಒಂದು ಕಿ.ಮೀ ದೂರದ ಚೆಟ್ಟುತೋಡು ಎಂಬಲ್ಲಿ ಚಿರತೆಯದ್ದೆನ್ನಲಾದ ಹೆಜ್ಜೆಗುರುತು ಸೋಮವಾರ ಪತ್ತೆಯಾಗಿದೆ. ಕುಣಿಯೇರಿ, ಮೀನಂಕುಳಂ, ಚೆಟ್ಟುತ್ತೋಡು, ಬೇಪು ಹಾಗೂ ಆಸುಪಾಸಿನ ಜನತೆಗೆ ರಾತ್ರಿಯಾಗುತ್ತಿದ್ದಂತೆ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದ ಕೆಲವು ಮನೆಗಳಲ್ಲಿ ಸಾಕುಪ್ರಾಣಿಗಳು ನಾಪತ್ತೆಯಾಗಿರುವುದಲ್ಲದೆ, ಅರ್ಧ ತಿಂದ ಸ್ಥಿತಿಯಲ್ಲಿ ನಾಯಿಯ ಕಳೇಬರ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.