ಕೋಲ್ಕತ್ತ: ನಬನ್ನಾ ಪ್ರತಿಭಟನಾ ಮೆರವಣಿಗೆ ವೇಳೆ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿ ಆಗಸ್ಟ್ 27ರಂದು ನಬನ್ನಾ ಪ್ರತಿಭಟನಾ ಮೆರವಣಿಗೆ ನಡೆದಿತ್ತು.
ಪ್ರತಿಭಟನಾಕಾರರು ಸರ್ಕಾರದ ಸಚಿವಾಲಯಕ್ಕೆ ನುಗ್ಗಲು ಪ್ರಯತ್ನಿಸಿದಾಗ ಕೋಲ್ಕತ್ತ ಹಾಗೂ ನೆರೆಯ ಹೌರಾದ ಹಲವೆಡೆ ಪೊಲೀಸರೊಂದಿಗೆ ಘರ್ಷಣೆಯಾಗಿತ್ತು. ಈ ವೇಳೆ ಕೆಲವರನ್ನು ಬಂಧಿಸಲಾಗಿತ್ತು.
ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿರುವ ನ್ಯಾಯಾಲಯ, ಪ್ರತಿಭಟನಾಕಾರರ ಬಂಧನ ಹಾಗೂ 24 ಗಂಟೆಗಳ ಬಳಿಕ ಅವರನ್ನು ಬಿಡುಗಡೆ ಮಾಡಿದ ಬಗ್ಗೆ ಸಮರ್ಥನೆ ನೀಡುವಂತೆ ಸೂಚಿಸಿದೆ. ಹಾಗೆಯೇ, ಪ್ರತಿಭಟನಾಕಾರರನ್ನು ಬಂಧಿಸುವಾಗ ಪೊಲೀಸರು, ಸೂಕ್ತ ನಿಯಮಗಳನ್ನು ಪಾಲಿಸಿದ್ದಾರೆಯೇ ಎಂಬುದನ್ನು ತಿಳಿಸುವಂತೆಯೂ ಹೇಳಿದೆ.
ನಬನ್ನಾ ಪ್ರತಿಭಟನಾ ಮೆರವಣಿಗೆ ವೇಳೆ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಯುವ ಸಲುವಾಗಿ ಹೌರಾ ನಗರ ಪೊಲೀಸರು ಮುನ್ನೆಚ್ಚರಿಕೆ ದೃಷ್ಟಿಯಿಂದ ಪ್ರತಿಭಟನಾಕಾರರನ್ನು ಬಂಧಿಸಿದ್ದರು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ವೇಳೆ ನ್ಯಾ. ರಾಜರ್ಷಿ ಭಾರದ್ವಾಜ್ ಅವರು, ಯಾವ ನಿರ್ದಿಷ್ಠ ಸಮಸ್ಯೆ ಉಂಟಾಗುತ್ತಿತ್ತು ಎಂದು ಕೇಳಿದ್ದಾರೆ. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮಂಗಳವಾರದೊಳಗೆ ಸಲ್ಲಿಸುವಂತೆ ನಿರ್ದೇಶಿಸಿದೆ.
ದೂರುದಾರರ ಪರ ವಾದ ಮಂಡಿಸಿದ ವಕೀಲ ರಾಜ್‌ದೀಪ್ ಮಜುಂದಾರ್ ಅವರು, ಬಂಧನ ಕ್ರಮವು ಕಾನೂನುಬಾಹಿರವಾಗಿತ್ತು. ಹೀಗಾಗಿ, ಬಂಧನಕ್ಕೊಳಗಾಗಿದ್ದವರಿಗೆ ಪರಿಹಾರ ಒದಗಿಸುವಂತೆ ಮತ್ತು ಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದರು.