ತಿರುವನಂತಪುರಂ: ಕೇರಳದಲ್ಲಿ ಮೀ ಟೂ ಸದ್ದು ಮಾಡುತ್ತಿದೆ. ಮಾಲಿವುಡ್‌ನಲ್ಲಿ ಲೈಂಗಿಕ ಕಿರುಕುಳದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಸಂವೇದನಾಶೀಲ ವಿಷಯಗಳನ್ನು ಬೆಳಕಿಗೆ ತಂದಿದೆ. ಅನೇಕ ಮಹಿಳಾ ತಂತ್ರಜ್ಞರು, ನಟಿಯರ ಮೇಲೆ ದೊಡ್ಡ ಸ್ಟಾರ್‌ಗಳು ಕಿರುಕುಳ ನೀಡಿದ ಆರೋಪವಿದೆ.
ಇದರ ಜೊತೆಗೆ ಹಲವು ನಟಿಯರು ತಮಗಾದ ಕಿರುಕುಳದ ಬಗ್ಗೆ ಮಾತನಾಡುವ ಮೂಲಕ ಸೆನ್ಸೇಷನಲ್ ಆಗಿದ್ದಾರೆ. ಇದೇ ವೇಳೆ ಮಹಿಳಾ ನಾಯಕಿಯೊಬ್ಬರು ಈ ಕಾಸ್ಟಿಂಗ್ ಕೌಚ್ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ ಕಾಂಗ್ರೆಸ್ ಪಕ್ಷದಲ್ಲೂ ಇದೆ ಎಂದು ಬಾಂಬ್ ಸಿಡಿಸಿದ್ದಾರೆ.
ಕೇರಳ ಕಾಂಗ್ರೆಸ್ ಕಾಸ್ಟಿಂಗ್ ಕೌಚ್ ಸಂಸ್ಕೃತಿಯನ್ನು ಹೊಂದಿದೆ ಎಂದು ಆ ಪಕ್ಷದ ನಾಯಕಿ ಸಿಮಿರೋಸ್‌ಬೆಲ್ ಆರೋಪಿಸಿದ್ದಾರೆ. ರೋಸ್‌ಬೆಲ್ ಅವರು ರಾಜ್ಯ ಮುಖಂಡ ವಿ.ಡಿ. ಸತೀಶನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಪುರುಷ ನಾಯಕರನ್ನು ಸಂತೃಪ್ತಿಪಡಿಸಿದರೆ ಮಾತ್ರ ಮಹಿಳೆಯರು ಪ್ರಮುಖ ಸ್ಥಾನಗಳಿಗೆ ಏರಬಹುದು. ಇಲ್ಲವಾದರೆ ಸಾಮರ್ಥ್ಯ, ಅನುಭವವಿದ್ದರೂ ನಿರ್ಲಕ್ಷಿಸುತ್ತಾರೆ ಎಂದು ಆರೋಪಿಸಿದ್ದಾರೆ.
ನಾಯಕತ್ವಕ್ಕೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಪಕ್ಷದಲ್ಲಿ ಅವಕಾಶ ನೀಡಲಾಗುತ್ತದೆ. ಕಾಸ್ಟಿಂಗ್ ಕೌಚ್ ಗೆ ಹೋಲಿಸಬಹುದಾದ ಪರಿಸ್ಥಿತಿಯು ಕಾಂಗ್ರೆಸ್ ಪಕ್ಷದೊಳಗೆ ಮನೆ ಮಾಡಿದೆ. ಘನತೆ ಮತ್ತು ಹೆಮ್ಮೆ ಇರುವ ಮಹಿಳೆಯರು ಈ ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪಕ್ಷದೊಳಗೆ ಮುನ್ನಡೆಯಲು ಮಹಿಳಾ ಸದಸ್ಯರು ಆಗಾಗ್ಗೆ ಶೋಷಣೆಯನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ ಎಂದು ಪ್ರಾದೇಶಿಕ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೋಸ್‌ಬೆಲ್ ಹೇಳಿಕೊಂಡಿದ್ದಾರೆ .
ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಯ ಮಹಿಳಾ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಸೇರಿದಂತೆ ಇತರರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ನಾಯಕತ್ವಕ್ಕೆ ಜಂಟಿಯಾಗಿ ಮನವಿ ಮಾಡಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.