ರಾಹುಲ್ ಗಾಂಧಿಯವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅತ್ಯಗತ್ಯ ಎಂದು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ರಾಜಸ್ಥಾನದ ಚಿತ್ತೋರ್‌ಗಢದ ಬಿಜೆಪಿ ಸಂಸದ ಜೋಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ರಾಹುಲ್ ಗಾಂಧಿಯವರ ಹೇಳಿಕೆಗಳು ಕೇವಲ ರಾಜಕೀಯವಲ್ಲ. ಅವರ ದೇಶ ವಿರೋಧಿ ಮನಸ್ಥಿತಿಯ ಭಾಗವಾಗಿದೆ. ಅವರ ಹೇಳಿಕೆಗಳಿಂದ ದೇಶದ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ' ಎಂದು ಜೋಶಿ ತಿಳಿಸಿದ್ದಾರೆ.
'ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಹೇಳಿಕೆಗಳನ್ನು ಸಮರ್ಥಿಸಲಾಗುವುದಿಲ್ಲ. ಹಾಗಾಗಿ ಕೂಡಲೇ ಗಾಂಧಿಯವರ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಬೇಕು' ಎಂದು ಜೋಶಿ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಹಾಗಾಗಿ ಅವರ ಸಂಸತ್ತಿನ ಸದಸ್ಯತ್ವವನ್ನೂ ರದ್ದುಗೊಳಿಸಬೇಕು ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜಿತೇಂದ್ರ ಗೋಥ್ವಾಲ್ ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಅವರು ಈ ತಿಂಗಳ ಆರಂಭದಲ್ಲಿ ಅಮೆರಿಕಕ್ಕೆ ನಾಲ್ಕು ದಿನಗಳ ಅನಧಿಕೃತ ಪ್ರವಾಸಕ್ಕೆ ತೆರಳಿದ್ದರು. ಭೇಟಿಯ ವೇಳೆಯಲ್ಲಿ ಅವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿದರು.
'ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ರದ್ದತಿ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ' ಎಂದು ಹೇಳಿದ್ದಾಗಿ ವರದಿಯಾಗಿತ್ತು. ನಂತರ ಮಾಧ್ಯಮ ಸಂವಾದದಲ್ಲಿ, 'ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ 50 ಮೀರಿ ವಿಸ್ತರಿಸಲಿದ್ದೇವೆ' ಎಂದು ರಾಹುಲ್ ಗಾಂಧಿ ಹೇಳಿದ್ದರು.
ಭಾರತದಲ್ಲಿ ಗುರುದ್ವಾರಗಳಿಗೆ ತೆರಳುವಾಗ ಸಿಖ್ಖರು ಟರ್ಬನ್ ಧರಿಸಲು ಅವಕಾಶ ನೀಡಲಾಗುತ್ತದೆಯೇ ಎಂದು ರಾಹುಲ್ ಪ್ರಶ್ನಿಸಿದ್ದರು. ರಾಹುಲ್ ಹೇಳಿಕೆಯು ಭಾರತದ ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ನಾಯಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಛತ್ತೀಸಗಢದಲ್ಲಿ 3, ಕರ್ನಾಟಕದಲ್ಲಿ 1 ಎಫ್‌ಐಆರ್ ದಾಖಲಾಗಿದೆ.